ಪ್ರೊ ಕಬಡ್ಡಿ ಲೀಗ್‌: ಮುಂಬಾ–ಪುಣೇರಿ ಪಂದ್ಯ ಟೈ ಹೈದರಾಬಾದ್: ಪ್ರೊ ಕಬಡ್ಡಿ ಲೀಗ್‌ನ ರೋಚಕ ಪಂದ್ಯದಲ್ಲಿ ಕೊನೆಗಳಿಗೆಯಲ್ಲಿ ಹಿನ್ನಡೆಯಿಂದ ಪುಟಿದೆದ್ದ ಯು.ಮುಂಬಾ ತಂಡ 32–32 ರಿಂದ ಪುಣೇರಿ ಪಲ್ಟನ್‌ ಜೊತೆ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆಗೆ ಪುಣೇರಿ ತಂಡವು 19–17 ಪಾಯಿಂಟ್ಸ್‌ಗಳಿಂದ ಮುನ್ನಡೆ ಪಡೆದಿತ್ತು. ಪಂದ್ಯದ ಆರಂಭದಿಂದಲೂ ಉಭಯ ತಂಡಗಳ ಆಟಗಾರರು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಅಲ್ಲದೇ ಉಭಯ ತಂಡಗಳು ತಲಾ ಒಂದು ಬಾರಿ ಅಲೌಟ್‌ ಆದವು. ಪುಣೇರಿ ಪರ ನಾಯಕ ಅಸ್ಲಾಂಇನಾಮದಾರ್‌ 8, ಮೋಹಿತ್ ಗೋಯತ್ 7 ಪಾಯಿಂಟ್ಸ್‌ ಕಲೆ ಹಾಕಿದರು. ಟ್ಯಾಕಲ್‌ನಲ್ಲಿ ಮೊಹಮ್ಮದ್‌ರೇಝಾ 6 ಮತ್ತು ಸಂಕೇತ್ ಸಾವಂತ್ 4 ಅ‌ಂಕಗಳನ್ನು ತಂಡಕ್ಕೆ ತಂದಿತ್ತರು. ಇದು 14 ಪಂದ್ಯಗಳಲ್ಲಿ ಪುಣೇರಿಗೆ 11ನೇ ಗೆಲುವು. 60 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮುಂಬಾ ಪರ ರೈಡರ್‌ ಗುಮನ್ ಸಿಂಗ್ 15 ಪಾಯಿಂಟ್ಸ್‌ ಪಡೆದು ಮಿಂಚಿದರು. ಗೋಕುಲಕಣ್ಣನ್ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ತಂಡಕ್ಕೆ ಒದಗಿಸಿಕೊಟ್ಟರು. ಆಡಿರುವ 14 ಪಂದ್ಯಗಳಲ್ಲಿ ಆರು ಪಂದ್ಯದಲ್ಲಿ ಜಯ ಸಾಧಿಸಿರುವ ಯು ಮುಂಬಾ, 40 ಪಾಯಿಂಟ್ಸ್‌ನೊಂದಿಗೆ ಆರನೇ ಸ್ಥಾನದಲ್ಲಿದೆ. ಇಂದಿನ ಪಂದ್ಯ: ಹರಿಯಾಣ ಸ್ಟೀಲರ್ಸ್‌–ದಬಂಗ್ ಡೆಲ್ಲಿ (ರಾತ್ರಿ 8), ತೆಲುಗು ಟೈಟನ್ಸ್‌–ತಮಿಳ್ ತಲೈವಾಸ್ (ರಾತ್ರಿ 9) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.