ಮಹಿಳಾ ಹಾಕಿ ಫೈವ್ಸ್‌ ವಿಶ್ವಕಪ್‌: ಸೆಮಿಗೆ ಭಾರತ ಮಸ್ಕತ್‌: ರುತಾಜಾ ದಾದಾಸೊ ಪಿಸಾಲ್ ಮತ್ತು ದೀಪಿಕಾ ಸೊರೆಂಗ್ ಅವರ ಅಮೋಘ ಆಟದ ನೆರವಿನಿಂದ ಭಾರತದ ತಂಡವು ಎಫ್ಐಎಚ್ ಮಹಿಳಾ ಹಾಕಿ ಫೈವ್ಸ್‌ ವಿಶ್ವಕ‍ಪ್‌ ಟೂರ್ನಿಯಲ್ಲಿ ಶುಕ್ರವಾರ ನ್ಯೂಜಿಲೆಂಡ್‌ ತಂಡವನ್ನು 11–1ರಿಂದ ಸುಲಭವಾಗಿ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು. ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿ ಒರಿಯಾ ಹೆಪಿ ನ್ಯೂಜಿಲೆಂಡ್‌ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ, ಈ ಮುನ್ನಡೆ ಹೆಚ್ಚು ಹೊತ್ತು ಉಳಿಯಲಿಲ್ಲ. ಅದಾದ 15 ಸೆಕೆಂಡ್‌ನೊಳಗೆ ದೀಪಿಕಾ ಚೆಂಡನ್ನು ಗುರಿ ಸೇರಿಸಿ, ಭಾರತದ ತಂಡದ ಗೋಲನ್ನು ಸಮಬಲಗೊಳಿಸಿದರು. ಮೊದಲಾರ್ಧದಲ್ಲಿ 6–1ರಿಂದ ಮುನ್ನಡೆ ಪಡೆದ ಭಾರತವು, ಉತ್ತರಾರ್ಧದಲ್ಲೂ ಪಾರಮ್ಯ ಮೆರೆಯಿತು. ಚುರುಕಿನ ಆಟವಾಡಿದ ರುತುಜಾ (9ನೇ, 22ನೇ, 26ನೇ ಮತ್ತು 28ನೇ ನಿಮಿಷ) ನಾಲ್ಕು ಗೋಲು ಗಳಿಸಿ ಮಿಂಚಿದರು. ಅವರಿಗೆ ದೀಪಿಕಾ (2ನೇ, 25ನೇ ಮತ್ತು 29ನೇ) ಮೂರು ಬಾರಿ ಚೆಂಡನ್ನು ಗುರಿ ಸೇರಿಸಿ, ಉತ್ತಮ ಸಾಥ್‌ ನೀಡಿದರು. ಉಳಿದಂತೆ ಮುಮ್ತಾಜ್‌ ಖಾನ್‌ (10 ಮತ್ತು 11ನೇ), ಮರೀನಾ ಕುಜುರ್ (13 ಮತ್ತು 14ನೇ) ತಲಾ ಎರಡು ಗೋಲು ತಂದಿತ್ತು, ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು. ಭಾರತ ತಂಡವು ಸೆಮಿಫೈನಲ್‌ನಲ್ಲಿ ಶನಿವಾರ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.