: ಪಟ್ನಾ ಪೈರೇಟ್ಸ್‌ಗೆ ಮಣಿದ ವಾರಿಯರ್ಸ್ ಪಟ್ನಾ: ಮಂಜಿತ್‌ ಹಾಗೂ ಸಚಿನ್ ಅವರ ಚುರುಕಿನ ದಾಳಿಯ ನೆರವಿನಿಂದ ಪಟ್ನಾ ಪೈರೇಟ್ಸ್‌ ತಂಡವು ಶುಕ್ರವಾರ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಆವೃತ್ತಿಯ ಪಂದ್ಯದಲ್ಲಿ 44–28ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿತು. ಇಲ್ಲಿನ ಪಾಟಲಿ ಪುತ್ರ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಪಾರಮ್ಯ ಸಾಧಿಸಿದ ಪೈರೇಟ್ಸ್ ತಂಡ ವಿರಾಮದ ವೇಳೆಗೆ ಮುನ್ನಡೆಯಲ್ಲಿತ್ತು. ಉತ್ತರಾರ್ಧದಲ್ಲೂ ಸಾಂಘಿಕ ಪ್ರದರ್ಶನ ನೀಡಿದ ತಂಡವು 16 ಪಾಯಿಂಟ್ಸ್‌ ಅಂತರದಿಂದ ಎದುರಾಳಿ ತಂಡವನ್ನು ಮಣಿಸಿತು. ಪೈರೇಟ್ಸ್‌ನ ಮಂಜಿತ್‌ ರೈಡಿಂಗ್‌ ಮೂಲಕ 10 ಅಂಕಗಳೊಂದಿಗೆ ‘ಸೂಪರ್‌ ಟೆನ್‌’ ಸಾಧನೆ ಮಾಡಿದರು. ಮಯೂರ್ ಕದಮ್ ಟ್ಯಾಕಲ್‌ನಲ್ಲಿ 6 ಅಂಕವನ್ನು ತಂಡಕ್ಕೆ ಒದಗಿಸಿಕೊಟ್ಟರು. ವಾರಿಯರ್ಸ್‌ ಪರ ನಿತಿನ್ ಕುಮಾರ್‌ 10 ಪಾಯಿಂಟ್ಸ್‌ ಕಲೆ ಹಾಕಿದರು. ಈ ಗೆಲುವಿನ ಮೂಲಕ ಪಟ್ನಾ ಪೈರೇಟ್ಸ್ ತಂಡವು ಪಾಯಿಂಟ್ಸ್‌ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್‌ ಎಂಟನೇ ಸ್ಥಾನದಲ್ಲಿದೆ. ಮತ್ತೊಂದು ಪಂ‌ದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 44–35 ರಿಂದ ಯು. ಮುಂಬಾ ತಂಡವನ್ನು ಸೋಲಿಸಿತು. ಜೈಂಟ್ಸ್‌ ತಂಡದ ಪರ ಪಾರ್ಟಿಕ್ ದಹಿಯಾ 12 ಪಾಯಿಂಟ್ಸ್ ಸಂಪಾದಿಸಿದರು. ಮುಂಬಾ ಪರ ಗುಮನ್ ಸಿಂಗ್ ‘ಸೂಪರ್ ಟೆನ್’ ಸಾಧನೆ ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.