ಚೆಸ್‌ನಲ್ಲಿ ಪ್ರೇಕ್ಷಕರ ಗಮನ ಏಕೆ ಹೀಗೆ? ಚೆಸ್‌ ಆಟಗಾರ್ತಿ ದಿವ್ಯಾ ದೇಶಮುಖ್‌ ಅಳಲು ನವದೆಹಲಿ: ‘ಚೆಸ್‌ ಕ್ರೀಡೆಯಲ್ಲಿ ಲಿಂಗಭೇದವನ್ನು ಎದುರಿಸಿದ್ದೇನೆ. ಪುರುಷ ಆಟಗಾರರನ್ನು ಅವರ ಆಟಕ್ಕಾಗಿ ಶ್ಲಾಘಿಸಿದರೆ, ಆಟಗಾರ್ತಿಯರನ್ನು ಮಾತ್ರ ಅವರ ಆಟಕ್ಕೆ ಸಂಬಂಧವಿಲ್ಲದ ಅಪ್ರಸ್ತುತ ಅಂಶಗಳಿಂದ ಅಳೆಯುತ್ತಾರೆ’ ಎಂದು ಭಾರತದ ಚೆಸ್‌ ಆಟಗಾರ್ತಿ ದಿವ್ಯಾ ದೇಶಮುಖ್‌ ಬೇಸರ ವ್ಯಕ್ತಪಡಿಸಿದ್ದಾರೆ. ನೆದರ್ಲೆಂಡ್ಸ್‌ನಲ್ಲಿ ನಡೆದ ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿ ಬಳಿಕ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಧ್ವನಿಯೆತ್ತಿರುವ 18 ವರ್ಷದ ದಿವ್ಯಾ, ಕ್ರೀಡಾ ಕ್ಷೇತ್ರದಲ್ಲಿನ ಲಿಂಗ ತಾರತಮ್ಯ ಹಾಗೂ ಸ್ತ್ರೀದ್ವೇಷದ ಕುರಿತು ಅನುಭವ ಹಂಚಿಕೊಂಡಿದ್ದಾರೆ. ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಚಾಲೆಂಜರ್ಸ್‌ ವಿಭಾಗದಲ್ಲಿ ಆಡಿದ್ದ ದಿವ್ಯಾ 4.5 ಅಂಕಗಳೊಂದಿಗೆ 12ನೇ ಸ್ಥಾನ ಪಡೆದಿದ್ದರು. ಈ ಟೂರ್ನಿಯಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಗೆ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ಚೆನ್ನಾಗಿಯೇ ಆಡಿದ್ದೇನೆ. ಅದರ ಬಗ್ಗೆ ಹೆಮ್ಮೆಯಿದೆ. ಆದರೆ, ಪ್ರೇಕ್ಷಕರ ಗಮನ ಮಾತ್ರ ನನ್ನ ಆಟಕ್ಕಿಂತ, ನನ್ನ ಉಡುಪು, ಕೇಶವಿನ್ಯಾಸ, ಉಚ್ಚಾರಣೆ ಹಾಗೂ ಇತರ ಅಪ್ರಸ್ತುತ ಅಂಶಗಳ ಮೇಲೆಯೇ ಕೇಂದ್ರೀಕೃತವಾಗಿತ್ತು’ ಎಂದು ಕಳೆದ ವರ್ಷ ಏಷ್ಯನ್ ಮಹಿಳಾ ಚೆಸ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿದ್ದ ದಿವ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಕುರಿತು ಈ ಹಿಂದೆಯೇ ಮಾತನಾಡಬೇಕೆಂದು ಅಂದುಕೊಂಡಿದ್ದೆ. ಆದರೆ, ಈ ಟೂರ್ನಿ ಮುಗಿಯುವುದನ್ನು ಕಾಯುತ್ತಿದ್ದೆ. ಚೆಸ್‌ನಲ್ಲಿ ಮಹಿಳೆಯರನ್ನು ಪ್ರೇಕ್ಷಕರು ಹೇಗೆ ಲಘುವಾಗಿ ಪರಿಗಣಿಸುತ್ತಾರೆ ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಇದಕ್ಕೆ ಇತ್ತೀಚೆಗೆ ನಡೆದ ಟೂರ್ನಿಯೇ ಉದಾಹರಣೆ ಎಂದಿದ್ದಾರೆ. ‘ಸಂದರ್ಶನಗಳಲ್ಲಿ ನನ್ನ ಆಟವನ್ನು ಹೊರತುಪಡಿಸಿ ಪ್ರೇಕ್ಷಕರು ಚರ್ಚಿಸುವ ವಿಷಯವನ್ನು ನೋಡಿ ತೀವ್ರ ನಿರಾಸೆಯಾಗಿದೆ. ಆದರೆ, ಪುರುಷ ಆಟಗಾರರ ವಿಚಾರಕ್ಕೆ ಬಂದರೆ, ಅಲ್ಲಿ ಅವರ ಆಟದ ಬಗ್ಗೆಯೇ ಚರ್ಚೆಯಾಗುತ್ತದೆ. ಬೇರೆ ವಿಚಾರದ ಬಗ್ಗೆ ಕೇಳುವುದಿಲ್ಲ’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.