ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ವಿರುದ್ಧ ಕ್ರಮ: ಕ್ರೀಡಾ ಸಚಿವಾಲಯ ನವದೆಹಲಿ: ಅಮಾನತುಗೊಂಡಿರುವ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸಂಜಯ್ ಸಿಂಗ್ ಅವರು ಸರ್ಕಾರದ ಮಾನ್ಯತೆಗೆ ಸಂಬಂಧಿಸಿ ‘ಆಧಾರರಹಿತ ಮತ್ತು ಕುಚೇಷ್ಠೆಯ’ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ ಎಚ್ಚರಿಕೆ ನೀಡಿದೆ. ಡಬ್ಲ್ಯುಎಫ್‌ಐ ನಡೆಸುವ ಯಾವುದೇ ಟೂರ್ನಿಯನ್ನು ‘ಮಾನ್ಯತೆ ಪಡೆಯದ ಟೂರ್ನಿ’ ಎಂದು ಪರಿಗಣಿಸಲಾಗುವುದು ಎಂದೂ ಸಚಿವಾಲಯ ಪುನರುಚ್ಚರಿಸಿದೆ. ಸಂಜಯ್ ಸಿಂಗ್ ಅವರನ್ನು ಉದ್ದೇಶಿಸಿ ಸಚಿವಾಲಯವು ಬರೆದ ಪತ್ರದಲ್ಲಿ ಈ ವಿಷಯ ತಿಳಿಸಲಾಗಿದೆ. ಪುಣೆಯಲ್ಲಿ ಜನವರಿ 29 ರಿಂದ 31ರವರೆಗೆ ನಡೆಯುವ ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ 700 ಕುಸ್ತಿಪಟುಗಳು ಭಾಗವಹಿಸುವರು ಎಂದು ಸಿಂಗ್ ಕಳೆದ ಶನಿವಾರ ಹೇಳಿದ್ದರು. ಇದು ಸಚಿವಾಲಯದ ಕೆಂಗಣ್ಣಿಗೆ ಕಾರಣವಾಗಿತ್ತು. ಸಂಜಯ್ ಸಿಂಗ್ ನೇತೃತ್ವದ ಹೊಸ ಸಮಿತಿಯನ್ನು ಮೂರೇ ದಿನಕ್ಕೆ ಸರ್ಕಾರ ಅಮಾನತುಗೊಳಿಸಿತ್ತು. ಐಒಎ ನೇಮಿಸಿರುವ ಭೂಪೇಂದರ್ ಸಿಂಗ್ ಬಾಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯು, ಫೆ. 2 ರಿಂದ 5ರ ವರೆಗೆ ಜೈಪುರದಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಸುವುದಾಗಿ ಪ್ರತ್ಯೇಕವಾಗಿ ಪ್ರಕಟಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.