ಪ್ಯಾರಿಸ್ ಒಲಿಂಪಿಕ್ಸ್‌ಗೆ ವಿಷ್ಣು ಸರವಣನ್ ಅಡಿಲೇಡ್ (ಪಿಟಿಐ): ಭಾರತದ ಸೇಲಿಂಗ್ ಕ್ರೀಡಾಪಟು ವಿಷ್ಣು ಸರವಣನ್ ಅವರು ಪ್ಯಾರಿಸ್ ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಿದ್ದಾರೆ. ಬುಧವಾರ ಇಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 24 ವರ್ಷದ ಸರವಣನ್ ಅವರು ಒಲಿಂಪಿಕ್ಸ್ ಅರ್ಹತಾ ಮಟ್ಟವನ್ನು ಯಶಸ್ವಿಯಾಗಿ ಸಾಧಿಸಿದರು. ಪ್ಯಾರಿಸ್ ಕೂಟಕ್ಕೆ ಆಯ್ಕೆಯಾದ ಭಾರತದ ಮೊದಲ ಸೇಲರ್‌ ಅವರಾಗಿದ್ದಾರೆ. ಮುಂಬೈನಲ್ಲಿ ಸೇನೆಯಲ್ಲಿ ಸುಬೇದಾರ್ ಆಗಿರುವ ಅವರು ಹೋದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆದಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 152 ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿದ ಅವರು 26ನೇ ಸ್ಥಾನ ಗಳಿಸಿದರು. ಏಷ್ಯನ್ ದೇಶಗಳ ಸ್ಪರ್ಧಿಗಳಲ್ಲಿ ಅಗ್ರಸ್ಥಾನವನ್ನು ಅವರು ಪಡೆದರು. ಏಷ್ಯನ್ ಕೂಟದಲ್ಲಿ ಚಿನ್ನ ಗೆದ್ದಿದ್ದ ಸಿಂಗಪುರದ ಸ್ಪರ್ಧಿ ಮತ್ತು ಕಾಂಟಿನೆಂಟಲ್ ಕ್ವಾಲಿಫೈಯರ್‌ಗಳಾದ ಹಾಂಗ್‌ಕಾಂಗ್ ಮತ್ತು ಥಾಯ್ಲೆಂಡ್ ಸ್ಪರ್ಧಿಗಳನ್ನೂ ಸರವಣನ್ ಹಿಂದಿಕ್ಕಿದರು. ವಿಷ್ಣು ಒಟ್ಟು 174 ಸ್ಕೋರ್ ಮಾಡಿದರು. ನಿಯಮದ ಪ್ರಕಾರ ಈ ಸ್ಪರ್ಧೆಯ ಒಂದು ಸುತ್ತಿನಲ್ಲಿ ಗಳಿಸಿದ ಕನಿಷ್ಠ ಸ್ಕೋರ್ 49 ಆಗಿತ್ತು. ಅದರಿಂದ ಭಾಗಾಕಾರ ಮಾಡಿದಾಗ 125 ಬಂದಿತು. ಅದನ್ನೇ ಅವರ ಸ್ಕೋರ್ ಎಂದು ಪರಿಗಣಿಸಲಾಯಿತು. 2019ರಲ್ಲಿ ನಡೆದಿದ್ದ 21 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ನಲ್ಲಿ ವಿಷ್ಣು ಕಂಚು ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.