ರಾಷ್ಟ್ರೀಯ ಓಪನ್ ರೇಸ್‌ ವಾಕಿಂಗ್: ರಾಷ್ಟ್ರೀಯ ದಾಖಲೆ ಸುಧಾರಿಸಿದ ಅಕ್ಷದೀಪ್ ಸಿಂಗ್ ಚಂಡೀಗಢ: ಪಂಜಾಬ್‌ನ ಅಕ್ಷದೀಪ್‌ ಸಿಂಗ್ ಅವರು ಮಂಗಳವಾರ ಇಲ್ಲಿ ನಡೆದ ರಾಷ್ಟ್ರೀಯ ಓಪನ್ ರೇಸ್‌ ವಾಕಿಂಗ್ ಸ್ಪರ್ಧೆಗಳ ಪುರುಷರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆಯುವ ಹಾದಿಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು. ಅಕ್ಷದೀಪ್ ಈ ವರ್ಷದ ಮಧ್ಯದಲ್ಲಿ ನಡೆಯುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ರಾಂಚಿಯಲ್ಲಿ ನಡೆದ 2023ನೇ ಸಾಲಿನ ರಾಷ್ಟ್ರೀಯ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದ ಅಕ್ಷದೀಪ್, ಇಲ್ಲಿ ಇದೇ ಸ್ಪರ್ಧೆಯನ್ನು 1 ಗಂಟೆ 19ನಿಮಿಷ 38 ಸೆಕೆಂಡುಗಳಲ್ಲಿ ಪೂರೈಸಿ, ಈ ಹಿಂದಿನ ದಾಖಲೆ (1:19.55) ಸುಧಾರಿಸಿದರು. ಎರಡನೇ ಸ್ಥಾನ ಪಡೆದ ಸೂರಜ್ ಪನ್ವಾರ್ (ಉತ್ತರಾಖಂಡ) ಅವರೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ನಿಗದಿಪಡಿಸಿದ ಅರ್ಹತಾ ಗಡುವಿನೊಳಗೇ ಗುರಿತಲುಪಿದರು. ಅವರು 1ಗಂ. 19ನಿ.43 ಸೆ.ಗಳಲ್ಲಿ ಗುರಿತಲುಪಿದರು. ಅವರು ಒಲಿಂಪಿಕ್ಸ್‌ 20 ಕಿ.ಮೀ. ರೇಸ್‌ ವಾಕ್‌ಗೆ ಅರ್ಹತೆ ಪಡೆದ ಭಾರತದ ನಾಲ್ಕನೇ ಸ್ಪರ್ಧಿ ಎನಿಸಿದರು. ಪರಮಜೀತ್‌ ಬಿಷ್ಟ್ ಮತ್ತು ವಿಕಾಸ್‌ ಸಿಂಗ್‌ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಇನ್ನಿಬ್ಬರು ಸ್ಪರ್ಧಿಗಳು. ಅವರು ಜಪಾನ್‌ನಲ್ಲಿ ಕಳೆದ ವರ್ಷ ನಡದ ಏಷ್ಯನ್ ರೇಸ್‌ ವಾಕ್ ಚಾಂಪಿಯನ್‌ಷಿಪ್ಸ್ ಸಂದರ್ಭದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು. ಟ್ರ್ಯಾಕ್ ಮತ್ತು ಫೀಲ್ಡ್‌ ವಿಭಾಗದ ವೈಯಕ್ತಿಕ ಸ್ಪರ್ಧೆಯೊಂದರಲ್ಲಿ ದೇಶವೊಂದು ಮೂರು ಮಂದಿಯನ್ನು ಮಾತ್ರ ಕಳಿಸಲು ಅವಕಾಶವಿದೆ. ಇದೀಗ ನಾಲ್ವರಲ್ಲಿ ಮೂರು ಮಂದಿಯ ಹೆಸರನ್ನು ಅಂತಿಮಗೊಳಿಸುವ ಹೊಣೆ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಮೇಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.