ಬಾಕ್ಸಿಂಗ್: ಸೆಮಿಫೈನಲ್‌ಗೆ ನಿಖತ್‌, ಅರುಂಧತಿ ಸೋಫಿಯಾ (ಬಲ್ಗೇರಿಯಾ): ವಿಶ್ವ ಚಾಂಪಿಯನ್ ನಿಖತ್ ಝರೀನ್ ಮತ್ತು ಅರುಂಧತಿ ಚೌಧರಿ ಅವರು ಅರ್ಹ ಗೆಲುವಿನೊಡನೆ ಗುರುವಾರ 75ನೇ ಸ್ಟ್ರಾಂಡ್ಜ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. 50 ಕೆ.ಜಿ. ವಿಭಾಗದಲ್ಲಿ ನಡೆದ ದಿನದ ಮೊದಲ ಕ್ವಾರ್ಟರ್‌ಫೈನಲ್‌ನಲ್ಲಿ ನಿಖತ್, ಫ್ರಾನ್ಸ್‌ನ ಲಾದಿರಿ ವಾಸ್ಸಿಲಾ ಅವರನ್ನು 5–0 ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿದರು. ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಅವರು ಸ್ಥಳೀಯ ಬಾಕ್ಸಿಂಗ್ ಪಟು ಝ್ಲಾಟಿಸ್ಲಾವಾ ಚುಕಾನೋವಾ ಅವರನ್ನು ಎದುರಿಸಲಿದ್ದಾರೆ. ಅರುಂಧತಿ 66 ಕೆ.ಜಿ. ವಿಭಾಗದ ಎರಡನೇ ಸುತ್ತಿನಲ್ಲಿ ಉತ್ತಮ ರಕ್ಷಣಾ ತಂತ್ರಗಳನ್ನು ಅನುಸರಿಸಿ ಸರ್ಬಿಯಾದ ಮೆಟೊವಿಕ್ ಮಿಲೇನಾ ಅವರನ್ನು 5–0 ಅಂತರದಿಂದ ಸೋಲಿಸಿದರು. ಅವರು ಸೆಮಿಫೈನಲ್‌ನಲ್ಲಿ ಸಜೆಸ್ಸಿಕಾ ಟ್ರಿಬೆಲೊವಾ ವಿರುದ್ಧ ಸೆಣಸಾಡಲಿದ್ದಾರೆ. ಆದರೆ 57 ಕೆ.ಜಿ. ವಿಭಾಗದಲ್ಲಿ ಸಾಕ್ಷಿ 2–3 ಅಂತರದಲ್ಲಿ ಮಮಜೊನೊವಾ ಖುಮೊರಾಬೊನು (ಉಜ್ಬೇಕಿಸ್ತಾನ) ಅವರಿಗೆ ಮಣಿದರು. ಬುಧವಾರ ತಡರಾತ್ರಿ ನಡೆದ ಸ್ಪರ್ಧೆಗಳಲ್ಲಿ ದೀಪಕ್ (75. ಕೆ.ಜಿ) ಮತ್ತು ನವೀನ್ ಕುಮಾರ್ (92 ಕೆ.ಜಿ.) ಅವರು ತಮ್ಮ ಎದುರಾಳಿಗಳನ್ನು (ಕ್ರಮವಾಗಿ ಕಿರ್ಗಿಸ್ತಾನದ ಅಸನ್‌ಕುಲ್ ಉಲು ಸುಲ್ತಾನ್ ಮತ್ತು ಲಿಥುವೇನಿಯಾದ ವೊಯಿಸನರೊವಿಕ್ ಡೇರಿಯಸ್‌ ಅವರನ್ನು) ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಶುಕ್ರವಾರ ಭಾರತದ ಏಳು ಮಂದಿ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಅಮಿತ್ ಪಂಘಲ್ (51 ಕೆ.ಜಿ) ಅವರು ಮಂಗೋಲಿಯಾದ ಅಲ್ಡರ್‌ಕಿಶಿಗ್ ಬಟ್ಟುಲ್ಗ ವಿರುದ್ಧ, ಲಲಿತ್‌ (54 ಕೆ.ಜಿ), ಉಜ್ಬೇಕಿಸ್ತಾನದ ನೊರ್ಟೊಜಿವ್ ಖುಜನ್ಜಾರ್ ವಿರುದ್ಧ, ಸಚಿನ್ (57 ಕೆ.ಜಿ), ಜಾರ್ಜಿಯಾದ ಕಪಾನೇಜ್ ಜಿಯೊರ್ಗಿ ಅವರನ್ನು ಎದುರಿಸಲಿದ್ದಾರೆ. ರಜತ್ (67 ಕೆ.ಜಿ. ವಿಭಾಗ), ಅವರು ಉಕ್ರೇನಿನ ಮತಿಯಾಕುಬೊವ್ ಬೊಜೊರ್ಬೊಯ್ ಅವರ ವಿರುದ್ಧ ಸೆಣಸಾಡಲಿದ್ದಾರೆ. ಸ್ಟ್ರಾಂಡ್ಜ ಮೆಮೋರಿಯ್ ಟೂರ್ನಿಯು ಯುರೋಪಿನ ಅತ್ಯಂತ ಹಳೆಯ ಅಂತರರಾಷ್ಟ್ರೀಯ ಸ್ಪರ್ಧೆಯಾಗಿದ್ದು 30 ದೇಶಗಳ 300 ಮಂದಿ ಬಾಕ್ಸರ್‌ಗಳು ಇಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.