ಐಎಸ್‌ಪಿಎಲ್‌: ಸಹ ಮಾಲೀಕತ್ವ ಬಿಡ್‌ನಿಂದ ₹1,165 ಕೋಟಿ ಮುಂಬೈ: ಇಲ್ಲಿನ ಕ್ರೀಡಾಂಗಣದಲ್ಲಿ ಮೊದಲ ಬಾರಿ ನಡೆಯಲಿರುವ ಟೆನಿಸ್‌ ಬಾಲ್‌ ಟಿ10 ಕ್ರಿಕೆಟ್‌ ಟೂರ್ನಿಯಲ್ಲಿ (‘ಇಂಡಿಯನ್ ಸ್ಟ್ರೀಟ್‌ ಪ್ರೀಮಿಯರ್ ಲೀಗ್‌’ನಲ್ಲಿ) ಪಾಲ್ಗೊಳ್ಳುವ ಆರು ನಗರ ತಂಡಗಳ ಸಹ ಮಾಲೀಕರಿಗಾಗಿ ಕರೆಯಲಾಗಿದ್ದ ಬಿಡ್‌ ಫಲಿತಾಂಶ ಪ್ರಕಟಿಸಲಾಗಿದೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ₹1,165 ಕೋಟಿ ಹರಿದುಬಂದಿದೆ. ಅಕ್ಷಯ್ ಕುಮಾರ್ ಮಾಲೀಕತ್ವದ ಟೀಮ್ ಶ್ರೀನಗರ ಸಹ ಮಾಲೀಕತ್ವವನ್ನು ಎಸ್‌ಜಿ ಸ್ಪೋರ್ಟ್ಸ್ ಪ್ರೈವೇಟ್‌ ಲಿಮಿಟೆಡ್ ₹251 ಕೋಟಿಗೆ ಪಡೆದುಕೊಂಡಿದೆ. ಎಸ್‌ಜಿ ಸ್ಪೋರ್ಟ್ಸ್‌, ಸಂಜಯ್ ಗುಪ್ತಾ ಮತ್ತು ರೋಹನ್ ಗುಪ್ತಾ ಅವರ ಒಡೆತನದಲ್ಲಿದೆ. ಹೃತಿಕ್ ರೋಷನ್ ಮಾಲೀಕತ್ವದ ಟೀಮ್ ಬೆಂಗಳೂರು ಸಹ ಮಾಲೀಕತ್ವವನ್ನು ವೆಂಕಟ್‌ ಕೆ.ನಾರಾಯಣ ಅವರ ಕೆವಿಎನ್‌ ಎಂಟರ್‌ಪ್ರೈಸಸ್‌ ₹225 ಕೋಟಿಗೆ ಪಡೆದಿದೆ. ಅಮಿತಾಭ್ ಬಚ್ಚನ್ ಅವರ ಮುಂಬೈ ತಂಡದ ಸಹ ಮಾಲೀಕತ್ವವನ್ನು ನೀತಿ ಅಗರವಾಲ್ ಅವರ ಪಾತ್‌ ಇಂಡಿಯಾ ₹205.6 ಕೋಟಿಗೆ ಪಡೆದುಕೊಂಡಿದೆ. ರಾಮಚರಣ್ ಅವರ ಟೀಮ್‌ ಹೈದರಾಬಾದ್‌ ಸಹ ಮಾಲೀಕತ್ವದ ಹಕ್ಕನ್ನು ₹200 ಕೋಟಿಗೆ ಇರ್ಫಾನ್ ರಜಾಕ್ ಅವರ ಐಎನ್‌ಆರ್‌ ಹೋಲ್ಡಿಂಗ್ಸ್ ಪಡೆದುಕೊಂಡಿದೆ. ಸೂರ್ಯ ಮಾಲಕರಾಗಿರುವ ಟೀಮ್ ಚೆನ್ನೈನ ಸಹ ಮಾಲೀಕತ್ವವನ್ನು ರಾಜದೀಪಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಗುಪ್ತಾ ₹163.6 ಕೋಟಿಗೆ ವಹಿಸಿಕೊಂಡಿದ್ದಾರೆ. ಸೈಫ್ ಅಲಿ ಖಾನ್, ಕರೀನಾ ಕಪೂರ್ ಅವರ ಟೀಮ್ ಕೋಲ್ಕತ್ತದ ಸಹ ಮಾಲೀಕತ್ವ ₹120 ಕೋಟಿಗೆ ಅಕ್ಷಾ ಕಾಂಬೋಜ್ ಅವರ ಆ್ಯಸ್ಪೆಕ್ಟ್ ಗ್ಲೋಬಲ್ ವೆಂಚರ್ಸ್ ಪಾಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.