: ಮಿಥುನ್‌ಗೆ ಮಣಿದ ಶ್ರೀಕಾಂತ್ ಬ್ಯಾಂಕಾಕ್: ಭಾರತದ ಮಿಥುನ್ ಮಂಜುನಾಥ್, ಥಾಯ್ಲೆಂಡ್ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ, ಸ್ವದೇಶದ ಕಿದಂಬಿ ಶ್ರೀಕಾಂತ್ ಅವರಿಗೆ ಸೋಲಿನ ಆಘಾತ ನೀಡಿ ಗುರುವಾರ ಎಂಟರ ಘಟ್ಟ ತಲುಪಿದರು. ಆರನೇ ಶ್ರೇಯಾಂಕದ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿ ಎಂಟರ ಘಟ್ಟಕ್ಕೆ ಮುನ್ನಡೆಯಿತು. ಮೂರು ಗೇಮ್‌ಗಳ ಪಂದ್ಯದಲ್ಲಿ ಕನ್ನಡಿಗ ಮಿಥುನ್ ಮಂಜುನಾಥ್ ಅವರಿಗೆ 21–9, 13–21, 21–17 ರಿಂದ ತಮಗಿಂತ ಮೇಲಿನ ಕ್ರಮಾಂಕದ ಶ್ರೀಕಾಂತ್ ಅವರನ್ನು ಸೋಲಿಸಲು 54 ನಿಮಿಷ ಬೇಕಾಯಿತು. ಹಾಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಮಿಥುನ್, ವಿಶ್ವ ರ್‍ಯಾಂಕಿಂಗ್‌ನಲ್ಲಿ 63ನೇ ಸ್ಥಾನದಲ್ಲಿದ್ದಾರೆ. ಅವರು ಎಂಟರ ಘಟ್ಟದ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಮಾರ್ಕ್ ಕ್ಯಾಲಿಯೌ ಅವರನ್ನು ಎದುರಿಸಲಿದ್ದಾರೆ. ಅರ್ಹತಾ ಸುತ್ತನ್ನು ದಾಟಿ ಬಂದಿದ್ದ ಭಾರತದ ಎಸ್‌.ಶಂಕರ್ ಮುತ್ತುಸಾಮಿ ಸುಬ್ರಮಣಿಯನ್ ಅವರ ಸವಾಲೂ ಅಂತ್ಯಗೊಂಡಿತು. ಚೀನಾ ತೈಪಿಯ ಚುನ್ ಯಿ ಲಿನ್ 21–9, 21–11 ರಿಂದ ಸುಬ್ರಮಣಿಯನ್ ಅವರನ್ನು ಹಿಮ್ಮೆಟ್ಟಿಸಿದರು. ಅಶ್ಮಿತಾ ಚಾಲಿಹಾ ಮಹಿಳಾ ಸಿಂಗಲ್ಸ್‌ 16ರ ಸುತ್ತಿನ ಪಂದ್ಯದಲ್ಲಿ ಚೀನಾ ತೈಪಿಯ ಯು ಪೊ ಪೈ ಅವರನ್ನು 21–12, 15–21, 21–17 ರಲ್ಲಿ ಸೋಲಿಸಿದರು. ಆದರೆ ಭಾರತದ ಇನ್ನೋರ್ವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಹೊರಬಿದ್ದರು. ಅವರು 22–24, 7–21ರಲ್ಲಿ ಸ್ಥಳೀಯ ಆಟಗಾರ್ತಿ ಬುಸಾನನ್ ಒಂಗ್ಬನ್‌ರುಂಗ್‌ಫನ್ ಅವರಿಗೆ ಶರಣಾದರು.‌ ಮುನ್ನಡೆ: ಟ್ರಿಸಾ ಜೋಳಿ ಮತ್ತು ಗಾಯತ್ರಿ ಅವರು ಡಬಲ್ಸ್ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಸ್ವದೇಶದ ತನಿಶಾ ಕ್ರಾಸ್ಟೊ– ಅಶ್ವಿನಿ ಪೊನ್ನಪ್ಪ ಅವರನ್ನು 21–15, 24–22 ರಿಂದ ಸೋಲಿಸಿದರು. ಅವರು ಎಂಟರ ಘಟ್ಟದ ಪಂದ್ಯದಲ್ಲಿ ಇಂಡೊನೇಷ್ಯಾದ ಫ್ಯಾಬ್ರಿಯಾನ ದ್ವಿಪುಜಿ ಕುಸುಮಾ– ಅಮೇಲಿಯಾ ಪೃಥ್ವಿ ಅವರನ್ನು ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.