ಪ್ರೊ ಕಬಡ್ಡಿ: ಮಾ.1ರಂದು ಫೈನಲ್‌ ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ 10ನೇ ಆವೃತ್ತಿಯ ಪ್ಲೇ ಆಫ್‌ ಮತ್ತು ಫೈನಲ್‌ ಪಂದ್ಯಗಳನ್ನು ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲು ನಿರ್ಧರಿಸಲಾಗಿದೆ. ಫೆ.28ರಂದು ಸೆಮಿಫೈನಲ್‌ ಮತ್ತು ಮಾರ್ಚ್‌ 1ರಂದು ಫೈನಲ್‌ ಹಣಾಹಣಿ ನಡೆಯಲಿವೆ. ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆಯುವ ಮೊದಲೆರಡು ತಂಡಗಳು ನೇರವಾಗಿ ಸೆಮಿಫೈನಲ್‌ ಪ್ರವೇಶ ಪಡೆಯಲಿವೆ. ಮೂರನೇ, ನಾಲ್ಕನೇ, ಐದನೇ ಮತ್ತು ಆರನೇ ಸ್ಥಾನ ಪಡೆಯುವ ತಂಡಗಳು ಫೆ.26ರಂದು ಎಲಿಮಿನೇಷನ್‌ ಹಂತದಲ್ಲಿ ಸೆಣಸಲಿವೆ. ಮೂರನೇ ಸ್ಥಾನ ಪಡೆದ ತಂಡವು ಆರನೇ ಸ್ಥಾನ ಪಡೆದ ತಂಡವನ್ನು ಎಲಿಮಿನೇಟರ್‌ 1ರಲ್ಲಿ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡವು ಐದನೇ ಸ್ಥಾನ ಪಡೆದ ತಂಡವನ್ನು ಎಲಿಮಿನೇಟರ್‌ 2ರಲ್ಲಿ ಎದುರಿಸಲಿದೆ. ಎಲಿಮಿನೇಟರ್‌ 1ರ ವಿಜೇತ ತಂಡವು ಲೀಗ್‌ನಲ್ಲಿ ಅಗ್ರ ಸ್ಥಾನ ಪಡೆಯುವ ತಂಡದೊಂದಿಗೆ ಮತ್ತು ಎಲಿಮಿನೇಟರ್‌ 2ರ ವಿಜೇತ ತಂಡವು ಲೀಗ್‌ ಹಂತದಲ್ಲಿ ಎರಡನೇ ಸ್ಥಾನ ಪಡೆಯುವ ತಂಡದೊಂದಿಗೆ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪ್ರೊ ಕಬಡ್ಡಿ ಲೀಗ್‌ನ ದೆಹಲಿ ಲೆಗ್‌ನ ಪಂದ್ಯಗಳು ಶುಕ್ರವಾರದಿಂದ ತ್ಯಾಗರಾಜ್ ಕ್ರೀಡಾ ಸಂಕೀರ್ಣನಲ್ಲಿ ನಡೆಯಲಿವೆ. ಇಂದಿನ ಪಂದ್ಯಗಳು ಡೆಲ್ಲಿ ದಬಾಂಗ್‌– ಬೆಂಗಾಲ್‌ ವಾರಿಯರ್ಸ್‌ (ರಾತ್ರಿ 8) ಗುಜರಾತ್‌ ಜೈಂಟ್ಸ್‌– ಹರಿಯಾಣ ಸ್ಟೀಲರ್ಸ್‌ (ರಾತ್ರಿ 9) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.