ಭಾರತ ಪ್ಯಾರಾಲಿಂಪಿಕ್ ಸಮಿತಿ ಅಮಾನತು ನವದೆಹಲಿ (ಪಿಟಿಐ): ನಿಗದಿತ ಸಮಯಕ್ಕೆ ಚುನಾವಣೆ ನಡೆಸದ ಕಾರಣ ಭಾರತ ಪ್ಯಾರಾಲಿಂಪಿಕ್ಸ್ ಸಮಿತಿಯನ್ನು (ಪಿಸಿಐ) ಶುಕ್ರವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಇದರಿಂದಾಗಿ ಭಾರತದಲ್ಲಿ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ ಆತಿಥ್ಯದ ಮೇಲೆ ಮೋಡ ಕವಿದಂತಾಗಿದೆ. ಮಾರ್ಚ್ 6 ರಿಂದ 15 ರವರೆಗೆ ಇಲ್ಲಿನ ಕರ್ಣಿಸಿಂಗ್ ರೇಂಜ್‌ನಲ್ಲಿ ನಡೆಯಲಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ ಭಾರತಕ್ಕೆ ನಿಗದಿಪಡಿಸಿದ ಮೊದಲ ಮೆಗಾ ಪ್ಯಾರಾ ಶೂಟಿಂಗ್ ಸ್ಪರ್ಧೆಯಾಗಿದೆ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ 24 ಕೋಟಾ ಸ್ಥಾನಗಳನ್ನು ಪಡೆಯಲು ಇಲ್ಲಿ ಅವಕಾಶ ಸಿಗಲಿದೆ. 52 ದೇಶಗಳ 500 ಕ್ಕೂ ಹೆಚ್ಚು ಪಿಸ್ತೂಲ್, ರೈಫಲ್ ಮತ್ತು ಶಾಟ್‌ಗನ್‌ಗಳ ಶೂಟರ್‌ಗಳು ಸ್ಪರ್ಧಿಸುವ ನಿರೀಕ್ಷೆಯಿದೆ. ಅರ್ಹತಾ ಸುತ್ತಿನ ಕೊನೆಯ ಸ್ಪರ್ಧೆಯಲ್ಲಿ ಪ್ಯಾರಾಲಿಂಪಿಕ್ಸ್ ಕೋಟಾ ಸ್ಥಾನಗಳನ್ನು ಪಡೆಯುವ ಗುರಿಯನ್ನು ಹೊಂದಿದ್ದಾರೆ. ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಕ್ಕಾಗಿ ಸಚಿವಾಲಯವು ಫೆಬ್ರುವರಿ 2 ರಂದು ಪಿಸಿಐ ಮಾನ್ಯತೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಆದಾಗ್ಯೂ, ಫೆಬ್ರುವರಿ 2 ರಂದು ಸಚಿವಾಲಯದ ನಿರ್ಧಾರದ ನಂತರ, ಪಿಸಿಐ ಸ್ಪರ್ಧಿಗಳ ಹೆಸರನ್ನು ದೃಢೀಕರಿಸುವ, ವೀಸಾ ವ್ಯವಸ್ಥೆ ಮಾಡುವ ಮತ್ತು ಸ್ಪರ್ಧೆಯ ನಿರ್ವಹಣೆಗಾಗಿ ತಾಂತ್ರಿಕ ತಂಡವನ್ನು ಸ್ಥಾಪಿಸುವ ಅಂತಿಮ ಹಂತದ ಸಮಯದಲ್ಲಿ ಪ್ರತಿಷ್ಠಿತ ಕ್ರೀಡಾಕೂಟದ ಮೇಲೆ ಅನಿಶ್ಚಿತತೆ ಮುಂದುವರಿದಿದೆ. ಪಿಸಿಐ ನಿರ್ವಹಿಸುವ ಈ ಕಾರ್ಯಗಳನ್ನು ಕೈಗೊಳ್ಳಲು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಆಡಳಿತಗಾರರು ಮತ್ತು ಕ್ರೀಡಾಪಟುಗಳನ್ನು ಒಳಗೊಂಡ ತಾತ್ಕಾಲಿಕ ಸಮಿತಿ ರಚಿಸಲು ಐಪಿಸಿಯೊಂದಿಗೆ ಸಮನ್ವಯ ಸಾಧಿಸುವಂತೆ ಸಚಿವಾಲಯವು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್) ನಿರ್ದೇಶನ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.