ಇರಾನ್‌ನಲ್ಲಿ ಬ್ಯಾಡ್ಮಿಂಟನ್ ಟೂರ್ನಿ: ಸತೀಶ್– ಆದ್ಯಾ ಜೋಡಿಗೆ ಪ್ರಶಸ್ತಿ ನವದೆಹಲಿ: ಸತೀಶ್ ಕುಮಾರ್‌ ಕರುಣಾಕರನ್ ಮತ್ತು ಆದ್ಯಾ ವರಿಯತ್ ಅವರು ಇರಾನ್‌ನ ಯಜದ್‌ನಲ್ಲಿ ಭಾನುವಾರ ಮುಕ್ತಾಯಗೊಂಡ 32ನೇ ಫಜರ್ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಸ್ವದೇಶದ ಬಿ.ಸುಮೀತ್ ರೆಡ್ಡಿ– ಎನ್‌.ಸಿಕ್ಕಿ ರೆಡ್ಡಿ ಜೋಡಿಯನ್ನು ಸೋಲಿಸಿ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಶನಿವಾರ ನಡೆದ ಫೈನಲ್‌ನಲ್ಲಿ ಸತೀಶ್– ಆದ್ಯಾ ಜೋಡಿ 22–20, 21–14 ರಿಂದ ಸುಮೀತ್‌– ಸಿಕ್ಕಿ ಜೋಡಿಯನ್ನು ಸೋಲಿಸಿತು. ‌ಕೆ.ಸಾಯಿ ಪ್ರತೀಕ್ ಮತ್ತು ಕೃಷ್ಣ ಪ್ರಸಾದ್ ಗರಗ ಜೋಡಿ ಭಾನುವಾರ ನಡೆದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ 21–18, 21–19 ರಿಂದ ಮೆಕ್ಸಿಕೊದ ಜೊಬ್ ಕ್ಯಾಸ್ಟಿಲೊ– ಲೂಯತಿಸ್‌ ಅರ್ಮಾಂಡೊ ಮೊಂಟೊಯಾ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಎನ್ಗುಯೆನ್ ಹೈ ದಂಗ್ 21–17, 21–18 ರಿಂದ ಸತೀಶ್ ಕುಮಾರ್ ಅವರನ್ನು ಸೋಲಿಸಿದರೆ, ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಸಿನ್‌ ಯಾನ್ ಹ್ಯಾಪಿ ಲೊ 21–14, 21–12 ರಿಂದ ನಾಲ್ಕನೇ ಶ್ರೇಯಾಂಕದ ತಸ್ನಿಮ್ ಮೀರ್ ಅವರನ್ನು ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.