ಹರ್ಮನ್‌ಪ್ರೀತ್ ಮಿಂಚು; ಭಾರತಕ್ಕೆ ಜಯ ಭುವನೇಶ್ವರ್ (ಪಿಟಿಐ): ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಮಿಂಚಿನ ಆಟದಿಂದಾಗಿ ಭಾರತ ತಂಡವು ಶನಿವಾರ ಇಲ್ಲಿ ನಡೆದ ಎಫ್‌ಐಎಚ್‌ ಪ್ರೊ ಲೀಗ್ ಪುರುಷರ ಹಾಕಿ ಟೂರ್ನಿಯ ಪಂದ್ಯದಲ್ಲಿ ಸ್ಪೇನ್ ಎದುರು ಜಯಿಸಿತು. ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್ ವಿಭಾಗಗಳಲ್ಲಿಯೂ ಪಾರಮ್ಯ ಮೆರೆದ ಆತಿಥೇಯ ತಂಡವು 4–1ರಿಂದ ಗೆದ್ದು ಬೀಗಿತು. ಏಳನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವಲ್ಲಿ ಹರ್ಮನ್‌ ಸಫಲರಾದರು. ಇದು ಹಾರ್ದಿಕ್ ಅವರು ತಮ್ಮ ವೃತ್ತಿಜೀವನದಲ್ಲಿ ಗಳಿಸಿದ 150ನೇ ಪೆನಾಲ್ಟಿ ಗೋಲು. 20ನೇ ನಿಮಿಷದಲ್ಲಿಯೂ ಮತ್ತೊಂದು ಗೋಲು ಗಳಿಸಿದರು. ಜುಗರಾಜ್ ಸಿಂಗ್ 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ದಾಖಲಿಸಿದರೆ, 50ನೇ ನಿಮಿಷದಲ್ಲಿ ಲಲಿತ್ ಕುಮಾರ್ ಉಪಾಧ್ಯಾಯ ಫೀಲ್ಡ್‌ ಗೋಲು ಹೊಡೆದರು. ಸ್ಪೇನ್‌ನ ಏಕೈಕ ಗೋಲು ಕೂಡ ಪೆನಾಲ್ಟಿ ಕಾರ್ನರ್‌ ಮೂಲಕವೆ ಬಂದಿತು. 34ನೇ ನಿಮಿಷದಲ್ಲಿ ಮಾರ್ಕ್ ಮಿರೇಲ್ಸ್‌ ಗೋಲಿನಲ್ಲಿ ಪರಿವರ್ತಿಸಿದರು. ಭಾರತದ ಹಾರ್ದಿಕ್ ಸಿಂಗ್ ಅವರು 199ನೇ ಪಂದ್ಯ ಆಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.