ಡೋಪಿಂಗ್: ನಿರ್ಮಲಾಗೆ ಎಂಟು ವರ್ಷ ನಿಷೇಧ ನವದೆಹಲಿ (ಪಿಟಿಐ): ಅಥ್ಲೀಟ್ ನಿರ್ಮಲಾ ಶೆರಾನ್ ಅವರು ಉದ್ದೀಪನ ಮದ್ದು ಸೇವನೆ ಮಾಡಿದ್ದಕ್ಕಾಗಿ ಎಂಟು ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ)ದ ಶಿಸ್ತು ಸಮಿತಿಯು ವಿಚಾರಣೆ ನಡೆಸಿ ಶಿಕ್ಷೆ ಪ್ರಕಟಿಸಿತು. 28 ವರ್ಷದ ನಿರ್ಮಲಾ ಅವರಿಂದ ಹೋದ ವರ್ಷ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್‌ಷಿಪ್‌ ಸಂದರ್ಭದಲ್ಲಿ ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗಿತ್ತು. ನಂತರ ನಡೆದ ಪರೀಕ್ಷೆಯಲ್ಲಿ ಅವರು ನಿಷೇಧಿತ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಅನಾಬೊಲಿಕ್ ಆ್ಯಂಡ್ರೊಜೆನಿಕ್ ಸ್ಟೆರಾಯ್ಡ್‌ ಮತ್ತು ಟೆಸ್ಟೊಸ್ಟಿರಾನ್ ಅಂಶ ಪತ್ತೆಯಾಗಿದೆ ಎಂದು ನಾಡಾ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿದೆ. ನಿರ್ಮಲಾ ಎಂಬ ಹೆಸರು ಮಾತ್ರ ಇದೆ. 2023ರ ಆಗಸ್ಟ್‌ 7ರಿಂದ ಅನ್ವಯವಾಗುವಂತೆ ಅವರ ಮೇಲೆ ಎಂಟು ವರ್ಷಗಳ ನಿಷೇಧ ಹಾಕಲಾಗಿದೆ. ಕೆಲವು ವರ್ಷಗಳ ಹಿಂದೆ ನಿರ್ಮಲಾ ಅವರು ಮಧ್ಯಮ ಅಂತರದ ಓಟದ ವಿಭಾಗದಲ್ಲಿ ಭಾರತದ ಪ್ರಮುಖ ಅಥ್ಲೀಟ್ ಆಗಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 400 ಮೀ ಓಟ ಮತ್ತು 4X400 ಮೀ ರಿಲೆಯಲ್ಲಿ ಸ್ಪರ್ಧಿಸಿದ್ದರು. 2017ರಲ್ಲಿ ಅವರು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆದ್ದಿದ್ದರು. ಆದರೆ 2018ರಲ್ಲಿ ಅವರು ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಅದರಿಂದಾಗಿ ಆ ವರ್ಷದ ಆಗಸ್ಟ್‌ನಿಂದ ನವೆಂಬರ್‌ವರೆಗೂ ಅವರು ಎಲ್ಲ ಸ್ಪರ್ಧೆಗಳಿಂದ ದೂರವುಳಿದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.