ಪ್ರೈಮ್ ವಾಲಿಬಾಲ್‌ ಲೀಗ್‌: ಬೆಂಗಳೂರು ಟಾರ್ಪಿಡೋಸ್‌ ತಂಡ ಸಜ್ಜು ಬೆಂಗಳೂರು: ಪ್ರೈಮ್ ವಾಲಿಬಾಲ್‌ ಲೀಗ್‌ ಮೂರನೇ ಆವೃತ್ತಿಯ ಟೂರ್ನಿಯು ಇದೇ 15ರಂದು ಆರಂಭವಾಗಲಿದ್ದು, ಪಂಕಜ್‌ ಶರ್ಮಾ ಸಾರಥ್ಯದ ಬೆಂಗಳೂರು ಟಾರ್ಪಿಡೋಸ್‌ ತಂಡವು ಚೊಚ್ಚಲ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಸಜ್ಜಾಗುತ್ತಿದೆ. ಅಮೆರಿಕದ ವಾಲಿಬಾಲ್ ಆಟಗಾರ ಡೇವಿಡ್ ಲೀ ಮಾರ್ಗದರ್ಶನದಲ್ಲಿ ಬೆಂಗಳೂರು ತಂಡವು ನಗರದ ಯಲಹಂಕದಲ್ಲಿರುವ ಪಡುಕೋಣೆ– ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮೂರು ತಿಂಗಳಿಂದ ಸತತ ಅಭ್ಯಾಸ ನಡೆಸುತ್ತಿದೆ. ಟಾರ್ಪಿಡೋಸ್‌ ಸೇರಿದಂತೆ ಒಟ್ಟು 9 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಕಳೆದ ಆವೃತ್ತಿಯಲ್ಲಿ ಬೆಂಗಳೂರು ತಂಡವು ಫೈನಲ್‌ನಲ್ಲಿ ಅಹಮದಾಬಾದ್‌ ಡಿಫೆಂಡರ್ಸ್‌ ವಿರುದ್ಧ ಸೋತು ರನ್ನರ್ಸ್‌ ಅಪ್‌ ಸ್ಥಾನ ಪಡೆದಿತ್ತು. ಈ ಬಾರಿ ಟಾರ್ಪಿಡೋಸ್‌ ತಂಡವು ಫೆ.15ರಂದು ಮೊದಲ ಆವೃತ್ತಿಯ ಚಾಂಪಿಯನ್‌ ತಂಡ ಕೋಲ್ಕತ್ತ ಥಂಡರ್‌ಬೋಲ್ಟ್ಸ್‌ ತಂಡದ ವಿರುದ್ಧ ಅಭಿಯಾನ ಆರಂಭಿಸಲಿದೆ. ಕನ್ನಡಿಗೆ ಸೃಜನ್‌ ಶೆಟ್ಟಿ ಸೇರಿದಂತೆ ಬ್ರೆಜಿಲ್‌ ಮತ್ತು ಆಸ್ಟ್ರೇಲಿಯಾದ ಆಟಗಾರರು ತಂಡದಲ್ಲಿದ್ದಾರೆ. ‘ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಬೆಂಗಳೂರು ತಂಡವು ಈಗ ಇನ್ನಷ್ಟು ಬಲಿಷ್ಠವಾಗಿದೆ. ಸರ್ವ್, ಡಿಫೆನ್ಸ್ ಮತ್ತು ಬ್ಲಾಕ್‌ನಲ್ಲಿ ತಂಡದ ಸಾಮರ್ಥ್ಯ ವೃದ್ಧಿಸಲಾಗಿದೆ. ಆದರೆ, ಆಟದ ತಂತ್ರ ಹಿಂದಿನ ವರ್ಷದಂತೆಯೇ ಇರಲಿದೆ. ಕೆಲ ಆಟಗಾರರನ್ನು ಬದಲಿಸಲಾಗಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ಕೋಚ್‌ ಡೇವಿಡ್ ಲೀ ಹೇಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.