ಪ್ರೊ ಲೀಗ್‌ ಹಾಕಿ: ನೆದರ್ಲೆಂಡ್ಸ್‌ಗೆ ಜಯ- ಶೂಟೌಟ್‌ನಲ್ಲಿ ಮಣಿದ ಭಾರತ ರೂರ್ಕೆಲಾ: ಭಾರತ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ವಿಶ್ವದ ಅಗ್ರ ಕ್ರಮಾಂಕದ ನೆದರ್ಲೆಂಡ್ಸ್ ವಿರುದ್ಧ ಶೂಟೌಟ್‌ನಲ್ಲಿ 2–4 ಗೋಲುಗಳಿಂದ ಸೋಲನುಭವಿಸಿತು. ಬುಧವಾರ ನಡೆದ ಈ ಪಂದ್ಯದಲ್ಲಿ ನಿಗದಿ ಅವಧಿಯ ಆಟದ ನಂತರ ಸ್ಕೋರ್ 1–1 ರಲ್ಲಿ ಸಮಬಲಗೊಂಡಿತ್ತು. ಭುವನೇಶ್ವರದಲ್ಲಿ ಇತ್ತೀಚೆಗೆ ನಡೆದ ಮೊದಲ ಲೆಗ್‌ ಪಂದ್ಯದಲ್ಲಿ ಭಾರತ ಶೂಟೌಟ್‌ನಲ್ಲಿ 4–2 ರಿಂದ ಇದೇ ಎದುರಾಳಿಯನ್ನು ಸೋಲಿಸಿತ್ತು. ಆಗ ನಿಗದಿ ಅವಧಿಯ ಆಟ 2–2ರಲ್ಲಿ ಸಮನಾಗಿತ್ತು. ಪ್ರಬಲ ನೆದರ್ಲೆಂಡ್ಸ್ ನಾಲ್ಕನೇ ನಿಮಿಷ ಫ್ಲೋರಿಸ್‌ ಮಿಡೆನ್‌ಡಾರ್ಪ್ ಮೂಲಕ ಮುನ್ನಡೆ ಗಳಿಸಿತು. ಕೊಯೆನ್ ಬಿಜೆನ್ಸ್ ಅವರ ಉತ್ತಮ ಯತ್ನವನ್ನು ಭಾರತದ ಗೋಲ್‌ಕೀಪರ್ ಕೃಷನ್ ಬಹಾದ್ದೂರ್ ಪಾಠಕ್ ಅವರು ತಡೆದು ಹಿಂದಕ್ಕೆ ಕಳಿಸಿದಾಗ, ಮಿಡೆನ್‌ಡಾರ್ಪ್ ರಿಬೌಂಡ್‌ನಲ್ಲಿ ಸ್ಕೋರ್ ಮಾಡಿದರು. ಇದು ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರ ಮೊದಲ ಗೋಲು. ಆದರೆ, ವಿಶ್ವ ಕ್ರಮಾಂದಕಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡ ಮೂರನೇ ಕ್ವಾರ್ಟರ್‌ನಲ್ಲಿ ಹಾರ್ದಿಕ್ ಸಿಂಗ್ ಅವರ ಮೂಲಕ ಸ್ಕೋರ್ ಸಮ ಮಾಡಿಕೊಂಡಿತು. ವಿರಾಮ ಕಳೆದು ಎಂಟು ನಿಮಿಷಗಳ ನಂತರ ದೊರೆತ ಪೆನಾಲ್ಟಿ ಕಾರ್ನರ್‌ನಲ್ಲಿ ಜುಗರಾಜ್ ಸಿಂಗ್ ಅವರು ಫ್ಲಿಕ್‌ ಮೂಲಕ ನಡೆಸಿದ ಗೋಲು ಯತ್ನವನ್ನು ಡಚ್‌ ರಕ್ಷಣಾ ಪಡೆ ತಡೆದು ಹಿಂದಕ್ಕಟಿತು. ಮರಳಿ ಬಂದ ಚೆಂಡನ್ನು, ಅಲ್ಲೇ ಅಕವಾಶಕ್ಕೆ ಕಾಯುತ್ತಿದ್ದ ಹಾರ್ದಿಕ್ ಗೋಲಾಗಿ ಪರಿವರ್ತಿಸಿದರು. ಸ್ಕೋರ್ ಸಮನಾಗಿ ಭಾರತದ ಆಟಗಾರರು ನಿಟ್ಟುಸಿರಿಟ್ಟರು. ಶೂಟೌಟ್‌ನಲ್ಲಿ ಭಾರತದ ಪರ ಅರಿಜಿತ್ ಸಿಂಗ್ ಹುಂಡಲ್ ಮತ್ತು ಲಲಿತ್‌ ಕುಮಾರ್‌ ಉಪಾಧ್ಯಾಯ ತಮ್ಮ ಯತ್ನದಲ್ಲಿ ಯಶಸ್ಸು ಕಂಡರೆ, ಸುಖಜೀತ್ ಸಿಂಗ್ ಮತ್ತು ಶಂಷೇರ್ ಸಿಂಗ್ ವಿಫಲರಾದರು. ನೆದರ್ಲೆಂಡ್ಸ್ ಈ ಗೆಲುವಿನಿಂದ ಎರಡು ಪಾಯಿಂಟ್ಸ್‌ ಸಂಪಾದಿಸಿದರೆ, ಭಾರತ ಒಂದು ಪಾಯಿಂಟ್‌ ಪಡೆಯಿತು. ಭಾರತ ಶನಿವಾರ ನಡೆಯುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ನಂತರ ಭಾನುವಾರ ನಡೆಯುವ ತವರಿನ ಕೊನೆಯ ಪ್ರೊ ಲೀಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.