ಟೆನಿಸ್‌: ನಡಾಲ್‌ ಶುಭಾರಂಭ ಅಕಪುಲ್ಕೊ, ಮೆಕ್ಸಿಕೊ: ಸ್ಪೇನ್‌ನ ರಫೆಲ್‌ ನಡಾಲ್‌, ಮೆಕ್ಸಿಕನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ನಡಾಲ್ 6–3, 6–3 ನೇರ ಸೆಟ್‌ಗಳಿಂದ ಮಿಶಾ ಜ್ವೆರೆವ್‌ ಅವರನ್ನು ಮಣಿಸಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ನಡಾಲ್‌ ಎರಡು ಸೆಟ್‌ಗಳಲ್ಲೂ ಮಿಂಚಿನ ಸಾಮರ್ಥ್ಯ ತೋರಿ ಅಭಿಮಾನಿಗಳನ್ನು ರಂಜಿಸಿದರು. ಇತರ ಪಂದ್ಯಗಳಲ್ಲಿ ನಿಕ್‌ ಕಿರ್ಗಿಯೊಸ್‌ 6–3, 7–5ರಲ್ಲಿ ಆ್ಯಂಡ್ರೆಸ್‌ ಸೆಪ್ಪಿ ಎದುರೂ, ಜಾನ್‌ ಇಸ್ನರ್‌ 6–3, 4–6, 6–3ರಲ್ಲಿ ಆಡ್ರಿಯನ್‌ ಮನ್ನಾರಿನೊ ಮೇಲೂ, ಸ್ಯಾಮ್‌ ಕ್ವೆರಿ 6–3, 6–2ರಲ್ಲಿ ಗುಯೆಲ್ಲರ್ಮೊ ಗಾರ್ಸಿಯಾ ಲೊಪೆಜ್‌ ವಿರುದ್ಧವೂ, ಮೆಕೆಂಜಿ ಮೆಕ್‌ಡೊನಾಲ್ಡ್‌ 6–1, 6–3ರಲ್ಲಿ ಎಮಿಲಿಯೊ ನವಾ ಮೇಲೂ, ಡೇವಿಡ್‌ ಫೆರರ್‌ 7–6, 7–6ರಲ್ಲಿ ಟೆನ್ನಿಸ್‌ ಸ್ಯಾಂಡ್‌ಗ್ರೆನ್‌ ಎದುರೂ, ಅಲೆಕ್ಸಾಂಡರ್‌ ಜ್ವೆರೆವ್‌ 6–3, 6–3ರಲ್ಲಿ ಅಲೆಕ್ಸಿ ಪೊಪಿರಿನ್‌ ವಿರುದ್ಧವೂ ವಿಜಯಿಯಾದರು. ಮಹಿಳಾ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಸ್ಲೋನ್‌ ಸ್ಟೀಫನ್ಸ್‌ 6–2, 6–2ರಲ್ಲಿ ಪೌಲಿನ್‌ ಪಾರ್ಮೆಂಟೀರ್‌ ಎದುರೂ, ಜೊಹನ್ನಾ ಕೊಂಥಾ 6–3, 6–2ರಲ್ಲಿ ಲೌರಾ ಸಿಗ್ಮಂಡ್‌ ಮೇಲೂ, ವಿಕ್ಟೋರಿಯಾ ಅಜರೆಂಕಾ 6–1, 6–2ರಲ್ಲಿ ಡೇನಿಯೆಲ್‌ ಕಾಲಿನ್ಸ್‌ ವಿರುದ್ಧವೂ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.