ಟೆನಿಸ್‌: ಡೆಜೆರ್‌ಗೆ ಪ್ರಶಸ್ತಿ ರಿಯೊ ಡಿ ಜನೈರೊ: ಸರ್ಬಿಯಾದ ಲಾಸ್ಲೊ ಡೆಜೆರ್‌, ರಿಯೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಡೆಜೆರ್‌ 6–3, 7–5 ನೇರ ಸೆಟ್‌ಗಳಿಂದ ಫೆಲಿಕ್ಸ್‌ ಆಗರ್‌ ಅವರನ್ನು ಮಣಿಸಿದರು. ಡೆಜೆರ್‌ ಅವರು ಎಟಿಪಿ ಟೂರ್‌ನಲ್ಲಿ ಗೆದ್ದ ಮೊದಲ ಟ್ರೋಫಿ ಇದಾಗಿದೆ. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 90ನೇ ಸ್ಥಾನ ಹೊಂದಿರುವ ಡೆಜೆರ್‌, ಮೊದಲ ಸೆಟ್‌ನಲ್ಲಿ ದಿಟ್ಟ ಆಟ ಆಡಿ ಗೆಲುವಿನ ತೋರಣ ಕಟ್ಟಿದರು. ಎರಡನೇ ಸೆಟ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 5–5 ಸಮಬಲ ಕಂಡುಬಂತು. 11ನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಡೆಜೆರ್‌, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಸಂಭ್ರಮಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.