ಎಬಿಎನ್‌ ಆ್ಯಮ್ರೊ ವರ್ಲ್ಡ್‌ ಟೆನಿಸ್‌ ಟೂರ್ನಿ: ಸೆಮಿಗೆ ಬೋಪಣ್ಣ–ಶಪೊವಲೋವ್‌ ರೋಟರ್‌ಡ್ಯಾಮ್‌: ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಡೆನಿಸ್‌ ಶಪೊವಲೋವ್‌ ಅವರು ಎಬಿಎನ್‌ ಆ್ಯಮ್ರೊ ವರ್ಲ್ಡ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಬೋಪಣ್ಣ ಮತ್ತು ಶಪೊವಲೋವ್‌ 6–2, 3–6, 10–7ರಲ್ಲಿ ನಾಲ್ಕನೇ ಶ್ರೇಯಾಂಕದ ಜೀನ್‌ ಜೂಲಿಯನ್‌ ರೋಜರ್‌ ಮತ್ತು ಹೋರಿಯಾ ಟೆಕಾವ್‌ಗೆ ಆಘಾತ ನೀಡಿದರು. ಶ್ರೇಯಾಂಕ ರಹಿತ ಜೋಡಿ ಬೋಪಣ್ಣ ಮತ್ತು ಡೆನಿಸ್‌, ಮೊದಲ ಸೆಟ್‌ನಲ್ಲಿ ಅಮೋಘ ಸರ್ವ್‌ಗಳನ್ನು ಮಾಡಿತು. ಮೂರು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಲೆಹಾಕಿ ಸುಲಭವಾಗಿ ಸೆಟ್‌ ಜಯಿಸಿತು. ಎರಡನೇ ಸೆಟ್‌ನಲ್ಲಿ ರುಮೇನಿಯಾದ ಟೆಕಾವ್‌ ಮತ್ತು ನೆದರ್ಲೆಂಡ್ಸ್‌ನ ರೋಜರ್‌ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು. ‘ಟೈ’ ಬ್ರೇಕರ್‌ನಲ್ಲಿ ಎರಡೂ ಜೋಡಿಗಳು ಜಿದ್ದಾಜಿದ್ದಿನಿಂದ ಸೆಣಸಿದವು. ಆಕರ್ಷಕ ಡ್ರಾಪ್‌ ಮತ್ತು ಬೇಸ್‌ಲೈನ್‌ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಬೋಪಣ್ಣ ಮತ್ತು ಶಪೊವಲೋವ್‌ ಪಂದ್ಯ ಗೆದ್ದು ಸಂಭ್ರಮಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.