ಅಮೆರಿಕ ಓಪನ್; ಎಂಟರ ಘಟ್ಟಕ್ಕೆ ಬೋಪಣ್ಣ ಜೋಡಿ ನ್ಯೂಯಾರ್ಕ್: ಕನ್ನಡಿಗ ರೋಹನ್ ಬೋಪಣ್ಣ ಮತ್ತು ಕೆನಡಾದ ಜೊತೆಗಾರ ಡೆನಿಸ್ ಶಪೊವಲೊವ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಶನಿವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಬೋಪಣ್ಣ ಜೋಡಿಯು 4–6, 6–4, 6–3 ರಿಂದ ಜರ್ಮನಿಯ ಕೆವಿನ್ ಕ್ರಾವಿಜ್ ಮತ್ತು ಆ್ಯಂಡ್ರೆಸ್ ಮೀಸ್ ವಿರುದ್ಧ ಜಯಭೇರಿ ಬಾರಿಸಿತು. ಎಂಟರ ಘಟ್ಟದ ಪಂದ್ಯದಲ್ಲಿ ಬೋಪಣ್ಣ ಮತ್ತು ಡೆನಿಸ್ ಅವರು ಡಚ್‌ –ರೊಮೆನಿಯನ್ ಜೋಡಿ ಜೀಲ್ ಜುಲಿಯನ್ ರೋಜರ್ ಹಾಗೂ ಹೊರಿಯಾ ಟೆಕ್ಯೂ ಅವರನ್ನು ಎದುರಿಸಲಿದ್ದಾರೆ. ಇಡೀ ಟೂರ್ನಿಯಲ್ಲಿ ಬೋಪಣ್ಣ ಒಬ್ಬರೇ ಹೋರಾಟದಲ್ಲಿ ಉಳಿದಿರುವ ಭಾರತದ ಆಟಗಾರನಾಗಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್ ಈಗಾಗಲೇ ಹೊರಬಿದ್ದಿದ್ದಾರೆ. ಸುಮಿತ್ ಅವರು ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ ಆಸ್ಟ್ರೀಯಾದ ಡಾಮ್ನಿಕ್ ಥೀಮ್ ವಿರುದ್ಧ ಸೋತಿದ್ದರು. ಮ್ಲೇಡೆನೊವಿಚ್‌ಗೆ ಕ್ವಾರಂಟೈನ್ ಮಹಿಳಾ ಡಬಲ್ಸ್‌ ಆಟಗಾರ್ತಿ, ಫ್ರಾನ್ಸ್‌ ನ ಕ್ರಿಸ್ಟಿನಾ ಮ್ಲೆಡೆನೊವಿಚ್ ಅವರಿಗೆ ಕ್ವಾರಂಟೈನ್ ಗೆ ತೆರಳಲು ನೋಟಿಸ್ ನೀಡಲಾಗಿದೆ. ಇದರಿಂದಾಗಿ ಅವರು ಅಮೆರಿಕ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.