ಇಂಡಿಯಾ ಲೆಜೆಂಡ್ಸ್‌ ಗಾಲ್ಫ್‌ ಆ. 28ರಿಂದ ನವದೆಹಲಿ: ‘ಲೆಜೆಂಡ್ಸ್‌ ಟೂರ್‌’ ಭಾರತದಲ್ಲಿ ತನ್ನ ಮೊದಲ ಗಾಲ್ಫ್‌ ಟೂರ್ನಿ ‘ಇಂಡಿಯಾ ಲೆಜೆಂಡ್ಸ್‌ ಚಾಂಪಿಯನ್‌ಷಿಪ್‌’ಅನ್ನು ಇದೇ 28 ರಿಂದ ಜೇಪಿ ಗ್ರೀನ್ಸ್‌ ಗಾಲ್ಫ್‌ ಕೋರ್ಸ್‌ನಲ್ಲಿ ನಡೆಸಲಿದೆ. 50 ವರ್ಷ ಮೇಲ್ಪಟ್ಟ ಆಟಗಾರರಿಗೆ ಈ ಟೂರ್ನಿ ನಡೆಯುತ್ತಿದೆ. ಭಾರತದಲ್ಲಿ ನಡೆಯುವ ಈ ಚೊಚ್ಚಲ ಟೂರ್ನಿಯು ₹4.19 ಕೋಟಿ ಬಹುಮಾನ ನಿಧಿಯನ್ನು ಹೊಂದಿದೆ. ಭಾರತದ ಗಾಲ್ಫ್‌ ದಂತಕತೆ ಜೀವ್‌ ಮಿಲ್ಖಾ ಸಿಂಗ್ ಆತಿಥ್ಯ ವಹಿಸುವರು. ಈ ಟೂರ್ನಿಯಲ್ಲಿ ಜೀವ್‌ ಮಿಲ್ಖಾಸೀಂಗ್‌, ಲೆಜೆಂಡ್ಸ್‌ ಟೂರ್‌ ಸದಸ್ಯ ಜ್ಯೋತಿ ರಾಂಧವಾ ಸೇರಿದಂತೆ 10 ಮಂದಿ ಭಾರತದ ಗಾಲ್ಫರ್‌ಗಳು ಪಾಲ್ಗೊಳ್ಳುವರು. ಈ ಹಿಂದೆ ಯುರೋಪಿಯನ್ ಸೀನಿಯರ್ ಟೂರ್ ಎಂದು ಕರೆಸಿಕೊಳ್ಳುತ್ತಿದ್ದ ದಿ ಲೆಜೆಂಡ್ಸ್ ಟೂರ್‌, 50 ವರ್ಷ ಮೇಲ್ಪಟ್ಟ ಆಟಗಾರರ ಅಧಿಕೃತ ಸ್ಪರ್ಧಾಕಣವಾಗಿದೆ. ಈ ಹಿಂದೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಗೆದ್ದವರು, ವಿಶ್ವದ ಮಾಜಿ ಅಗ್ರ ಆಟಗಾರರು, ರೈಡರ್‌ ಕಪ್‌ ಆಟಗಾರರು, ನಾಯಕರು ಲೆಜೆಂಡ್ಸ್ ಟೂರ್‌ ಭಾಗವಾಗಿದ್ದಾರೆ. ಎಚ್‌ಎಸ್‌ಬಿಸಿ ಇಂಡಿಯಾ, ಈ ಟೂರ್ನಿಯ ಮುಖ್ಯ ಪ್ರಾಯೋಜಕತ್ವ ಹೊಂದಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.