ರ್‍ಯಾಪಿಡ್ ಅಂಡ್ ಬ್ಲಿಟ್ಜ್‌ ಟೂರ್ನಿ: ಫ್ರಾನ್ಸ್‌ನ ಅಲಿರೇಜಾ ಚಾಂಪಿಯನ್ ಸೇಂಟ್‌ ಲೂಯಿ (ಅಮೆರಿಕ): ಕೊನೆಯ ದಿನ ಬ್ಲಿಟ್ಜ್ ಸುತ್ತಿನ ಉದ್ದಕ್ಕೂ ಮುನ್ನಡೆ ಸಾಧಿಸಿದ್ದ ಫ್ರಾನ್ಸ್‌ನ ಅಲಿರೇಜಾ ಫಿರೋಜ್‌, ಸೇಂಟ್‌ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಶುಕ್ರವಾರ ಮುಕ್ತಾಯಗೊಂಡ ಈ ಟೂರ್ನಿಯಲ್ಲಿ ಅವರು 13 ಪಾಯಿಂಟ್ಸ್ ಕಲೆಹಾಕಿದರು. ಇರಾನ್‌ನಲ್ಲಿ ಹುಟ್ಟಿ ಬೆಳೆದು ಕೆಲ ವರ್ಷ ಹಿಂದೆ ಫ್ರಾನ್ಸ್‌ನ ಪೌರತ್ವ ಪಡೆದ ಅಲಿರೇಜಾ, 2022ರಲ್ಲೂ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಬ್ಲಿಟ್ಜ್‌ನ 18 ಸುತ್ತುಗಳಲ್ಲಿ ಅವರಿಂದ ಅತ್ಯುತ್ತಮ ಸಾಧನೆ ಮೂಡಿಬಂತು. ಅವರು ಬಹುಮಾನದ ಮೊತ್ತವಾಗಿ ₹33,55,000 ಜೇಬಿಗಿಳಿಸಿಕೊಂಡರು. ಬ್ಲಿಟ್ಜ್‌ನ 18 ಸುತ್ತುಗಳ ಪೈಕಿ 13ನೇ ಸುತ್ತಿನಲ್ಲಿ ಪ್ರಜ್ಞಾನಂದ ಮೇಲೆ ಜಯಗಳಿಸಿದ ಅಲಿರೇಜಾ, ತಮ್ಮ ಮುನ್ನಡೆಯನ್ನು ಪೂರ್ಣ ಮೂರು ಪಾಯಿಂಟ್‌ಗೆ ಹೆಚ್ಚಿಸಿ ಪ್ರಶಸ್ತಿಯನ್ನು ಆಗಲೇ ಬಹುತೇಕ ಖಾತರಿಪಡಿಸಿಕೊಂಡಿದ್ದರು. ಅಮೆರಿಕದ ವೆಸ್ಲಿ ಸೊ (10 ಪಾಯಿಂಟ್ಸ್‌), ಹಿಕಾರು ನಕಾಮುರ (8) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ (1) ಅವರು ಕೊನೆಯ ಸ್ಥಾನದಿಂದ ಮೇಲೇರಲಿಲ್ಲ. 10 ಮಂದಿ ಆಟಗಾರರ ಟೂರ್ನಿಯಲ್ಲಿ ಪ್ರಜ್ಞಾನಂದ ₹5.87 ಲಕ್ಷ ಬಹುಮಾನ ಪಡೆದರು. ಕಳೆದ ಬಾರಿ ಚಾಂಪಿಯನ್ ಆಗಿದ್ದ ಅಮೆರಿಕದ ಫ್ಯಾಬಿಯಾನೊ ಕರುವಾನ (4.5) ಆರನೇ ಸ್ಥಾನ ಪಡೆದರು. ಅಂತಿಮ ಸ್ಥಾನ: 1. ಅಲಿರೇಜಾ ಫಿರೋಜ್ (ಫ್ರಾನ್ಸ್, 13), 2. ವೆಸ್ಲಿ ಸೊ (ಅಮೆರಿಕ, 10), 3. ಹಿಕಾರು ನಕಾಮುರ (ಅಮೆರಿಕ, 8), 4. ಲೆವೊನ್ ಅರೋನಿಯನ್ (ಅಮೆರಿಕ, 6.5), 5. ಮ್ಯಾಕ್ಸಿಂ ವೇಷಿಯಲ್ ಲಗ್ರಾವ್ (ಫ್ರಾನ್ಸ್‌, 6.5), 6. ಫ್ಯಾಬಿಯಾನೊ ಕರುವಾನಾ (ಅಮೆರಿಕ, 4.5), 7. ಇಯಾನ್ ನಿಪೊಮ್‌ನಿಷಿ (ರಷ್ಯಾ–ಫಿಡೆ, 4.5) 8. ನಾಡಿರ್ಬೆಕ್ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ, 3), 9. ಲೀನಿಯರ್ ಡೊಮಿಂಗೆಝ್ (ಅಮೆರಿಕ, 2), 10. ಆರ್‌.ಪ್ರಜ್ಞಾನಂದ (ಭಾರತ, 1). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.