ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಿ ಕ್ವಾರ್ಟರ್‌ಗೆ ಸತೀಶ್‌ ಯೊಕೊಹಾಮ: ಭಾರತದ ಸತೀಶ್‌ ಕುಮಾರ್‌ ಕರುಣಾಕರನ್‌ ಅವರು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 23 ವರ್ಷ ವಯಸ್ಸಿನ ಸತೀಶ್‌ ಅವರಿಗೆ ಬುಧವಾರ 32ರ ಘಟ್ಟದ ಪಂದ್ಯದಲ್ಲಿ ವಿಶ್ವದ ಮೂರನೇ ಕ್ರಮಾಂಕದ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸೆನ್ ಮುಖಾಮುಖಿಯಾಗಿದ್ದರು. ಆದರೆ, ಪಂದ್ಯ ಆರಂಭಗೊಂಡ ಮೂರೇ ನಿಮಿಷದಲ್ಲಿ ಗಾಯದ ಕಾರಣಕ್ಕಾಗಿ ಆಂಟೊನ್ಸನ್‌ ಸ್ಪರ್ಧೆಯಿಂದ ಹಿಂದೆ ಸರಿದರು. ಈ ವೇಳೆ ಸತೀಶ್‌ 6–1 ಮುನ್ನಡೆಯಲ್ಲಿದ್ದರು. ಭಾರತದ ಆಟಗಾರ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ 47ನೇ ಕ್ರಮಾಂಕದ ಕಾಂತಾಫೋನ್ ವಾಂಗ್‌ಚರೋನ್ (ಥಾಯ್ಲೆಂಡ್‌) ಅವರನ್ನು ಎದುರಿಸಲಿದ್ದಾರೆ. ಜಾರ್ಜ್‌ಗೆ ನಿರಾಸೆ: ಭಾರತದ ಮತ್ತೊಬ್ಬ ಆಟಗಾರ ಕಿರಣ್‌ ಜಾರ್ಜ್‌ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಅವರು 19-21, 14-21ರಿಂದ ಜಪಾನ್‌ನ ಕಾಂತಾ ತ್ಸುನೇಯಮಾ ಅವರಿಗೆ ಶರಣಾದರು. ಮಿಶ್ರ ಡಬಲ್ಸ್‌ನಲ್ಲಿ ಸುಮಿತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ದಂಪತಿಯ ಅಭಿಯಾನಕ್ಕೂ ತೆರೆಬಿತ್ತು. ಡೆನ್ಮಾರ್ಕ್‌ನ ಜೆಸ್ಪರ್ ಟಾಫ್ಟ್ ಮತ್ತು ಅಮಾಲಿ ಮೆಗೆಲುಂಡ್ ವಿರುದ್ಧದ ಪಂದ್ಯದಲ್ಲಿ 1–3ರಿಂದ ಹಿನ್ನಡೆಯಲ್ಲಿದ್ದ ಭಾರತದ ಜೋಡಿಯು ಗಾಯದ ಕಾರಣಕ್ಕೆ ನಿವೃತ್ತಿ ಪಡೆಯಿತು. ಮಹಿಳೆಯರ ಡಬಲ್ಸ್‌ನಲ್ಲಿ ರುತುಪರ್ಣ ಪಾಂಡಾ ಮತ್ತು ಶ್ವೇತಪರ್ಣ ಪಾಂಡಾ ಅವರೂ 32ರ ಘಟ್ಟದಲ್ಲಿ ಹೊರಬಿದ್ದರು. ಪಾಂಡಾ ಸಹೋದರಿಯರು 8-21, 14-21ರಿಂದ ಡೆನ್ಮಾರ್ಕ್‌ನ ಜೂಲಿ ಫಿನ್ನೆ ಇಪ್ಸೆನ್ ಮತ್ತು ಮೈ ಸುರೊ ವಿರುದ್ಧ ಸೋತರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತದ ಆಟಗಾರರು ಈ ಟೂರ್ನಿಯಲ್ಲಿ ಸ್ಪರ್ಧಿಸಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.