ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ: ಸೆಮಿಗೆ ರಫೆಲ್‌ ನಡಾಲ್‌ ಟೊರಾಂಟೊ : ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಇಲ್ಲಿ ನಡೆಯುತ್ತಿರುವ ಟೊರಾಂಟೊ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಪುರುಷರ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ನಡಾಲ್‌, 2–6, 6–4, 6–4ರಿಂದ ಕ್ರೊವೇಷ್ಯಾದ ಮರಿನ್‌ ಸಿಲಿಕ್‌ ಅವರನ್ನು ಮಣಿಸಿದರು. ಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಆಟಗಾರ, ರಷ್ಯಾದ ಕರೆನ್‌ ಕಚನೊವ್‌ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರೆನ್‌, 6–3, 6–1ರಿಂದ ರಾಬಿನ್‌ ಹಾಸೆ ಅವರನ್ನು ಮಣಿಸಿದರು. ‘ಮರಿನ್‌ ಉತ್ತಮವಾಗಿ ಆಡಿದರು. ಅವರ ಹೊಡೆತಗಳು ಬಲವಾಗಿದ್ದವು. ಆದರೆ, ಅವರಿಗೆ ಪ್ರತಿರೋಧ ಒಡ್ಡಿದೆ. ಅವರನ್ನು ಕಟ್ಟಿಹಾಕಲು ಯಶಸ್ವಿಯಾದೆ’ ಎಂದು ಪಂದ್ಯದ ನಂತರ ನಡಾಲ್‌ ಹೇಳಿದರು. ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಸ್ಟೆಫಾನೊಸ್‌ ಸಿಟ್ಸಿಪಾಸ್‌, 3–6, 7–6, 6–4ರಿಂದ ಹಾಲಿ ಚಾಂಪಿಯನ್‌ ರಷ್ಯಾದ ಅಲೆಕ್ಸಾಂಡರ್‌ ಜ್ವೆರೆವ್‌ ಅವರ ಎದುರು ಗೆದ್ದರು.ಅವರು ಸೆಮಿಫೈನಲ್‌ ಪಂದ್ಯದಲ್ಲಿ ಕೆವಿನ್‌ ಆ್ಯಂಡರ್ಸನ್‌ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ. ಎಂಟದ ಘಟ್ಟದ ಪಂದ್ಯದಲ್ಲಿ ಕೆವಿನ್‌, 6–2, 6–2ರಿಂದ ಗ್ರಿಗೊರ್‌ ಡಿಮಿಟ್ರೊವ್‌ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.