ಡೆವಿಸ್‌ ಕಪ್‌: ನಡಾಲ್‌ ಅಲಭ್ಯ ಮ್ಯಾಡ್ರಿಡ್‌: ಮಂಡಿ ನೋವಿನಿಂದಾಗಿ ರಫೆಲ್‌ ನಡಾಲ್‌ ಅವರು ಡೆವಿಸ್‌ ಕಪ್‌ ಟೆನಿಸ್‌ ಟೂರ್ನಿಯಫ್ರಾನ್ಸ್‌ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಸ್ಪೇನ್‌ನ ಟೆನಿಸ್‌ ಫೆಡರೇಷನ್‌ ಹೇಳಿದೆ. ‘ಲಿಲ್ಲಿಯಲ್ಲಿ ಜರುಗುವ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯವು ಸೆಪ್ಟೆಂಬರ್‌ 14ರಂದು ನಡೆಯಲಿದೆ. ಮಂಡಿ ನೋವಿನಿಂದಾಗಿ ನಡಾಲ್‌ ಅಂಗಳಕ್ಕಿಳಿಯುತ್ತಿಲ್ಲ’ ಎಂದು ಸ್ಪೇನ್‌ ತಂಡದ ನಾಯಕ ಸರ್ಗಿ ಬ್ರುಗೇರಾ ಹೇಳಿದ್ದಾರೆ. ‘ರಫೆಲ್‌ ಬದಲಿಗೆ ವಿಶ್ರ ಕ್ರಮಾಂಕ ಪಟ್ಟಿಯಲ್ಲಿ 52ನೇ ಸ್ಥಾನದಲ್ಲಿರುವ ಆಲ್ಬರ್ಟ್‌ ರಾಮೋಸ್‌ ವಿನೊಲಾಸ್‌ ಅವರು ಆಡಲಿದ್ದಾರೆ. ನಡಾಲ್‌ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಡೆವಿಸ್‌ ಕಪ್‌ ಟೂರ್ನಿಯಲ್ಲಿ ಸ್ಪೇನ್‌ ತಂಡಕ್ಕೆ ಬೆಂಬಲ ನೀಡುತ್ತಿರುವ ಅವರಿಗೆ ನಾವು ಅಭಾರಿ’ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದ ವೇಳೆ ನಡಾಲ್‌ ಗಾಯಗೊಂಡಿದ್ದರು. ತೀವ್ರ ನೋವಿನಿಂದಾಗಿ ಪಂದ್ಯದಿಂದ ನಿವೃತ್ತಿಯಾಗಿದ್ದರು.ಬೆನ್ನು ನೋವಿನ ಕಾರಣ ಇದೇ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಿಂದಲೂ ರಫೆಲ್‌ ನಿವೃತ್ತಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.