ನಾಲ್ಕರ ಘಟ್ಟಕ್ಕೆ ಹೀಥರ್‌ ವಾಟ್ಸನ್‌ ಕ್ಯೂಬೆಕ್‌ ಸಿಟಿ, ಕೆನಡಾ (ಎಎಫ್‌ಪಿ): ಅಪೂರ್ವ ಆಟ ಆಡಿದ ಬ್ರಿಟನ್‌ನ ಹೀಥರ್‌ ವಾಟ್ಸನ್‌, ಡಬ್ಲ್ಯುಟಿಎ ಇಂಟರ್‌ನ್ಯಾಷನಲ್‌ ಕ್ಯೂಬೆಕ್‌ ಸಿಟಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ. ಶುಕ್ರವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ವಾಟ್ಸನ್‌ 6–3, 6–4ರ ನೇರ ಸೆಟ್‌ಗಳಿಂದ ಕೆನಡಾದ ರೆಬೆಕ್ಕಾ ಮರಿನೊ ಅವರನ್ನು ಪರಾಭವಗೊಳಿಸಿದರು. ಹಿಂದಿನ ಪಂದ್ಯಗಳಲ್ಲಿ ಬಲಿಷ್ಠ ಎದುರಾಳಿಗಳನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಹೀಥರ್‌, ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಎರಡನೇ ಸೆಟ್‌ನಲ್ಲೂ ಬ್ರಿಟನ್‌ನ ಆಟಗಾರ್ತಿ ಪ್ರಾಬಲ್ಯ ಮೆರೆದರು. ಹೀಥರ್‌ ಅವರ ಬೇಸ್‌ಲೈನ್‌ ಮತ್ತು ಚುರುಕಿನ ಡ್ರಾಪ್‌ಗಳಿಗೆ ಮರಿನೊ ನಿರುತ್ತರರಾದರು. ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಪೌಲಿನ್‌ ಪಾರ್ಮೆಂಟಿಯರ್‌ 7–6, 6–1ರಲ್ಲಿ ವರ್ವರಾ ಲೆಪಚೆಂಕೊ ಎದುರೂ, ಅಮೆರಿಕದ ಸೋಫಿಯಾ ಕೆನಿನ್‌ 6–3, 6–1ರಲ್ಲಿ ಮೋನಿಕಾ ಪುಯಿಗ್‌ ಮೇಲೂ, ಅಮೆರಿಕದ ಜೆಸ್ಸಿಕಾ ಪೆಗುಲಾ 6–3, 7–5ರಲ್ಲಿ ಕ್ರೊವೇಷ್ಯಾದ ಪೆಟ್ರಾ ಮಾರ್ಟಿಕ್‌ ವಿರುದ್ಧವೂ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.