ಫೆಡರರ್‌–ಜೊಕೊವಿಚ್‌ಗೆ ಸೋಲು ಚಿಕಾಗೊ: ಯೂರೋಪ್‌ ತಂಡದ ರೋಜರ್‌ ‍ಫೆಡರರ್‌ ಮತ್ತು ನೊವಾಕ್‌ ಜೊಕೊವಿಚ್‌ ಅವರು ಲೇವರ್‌ ಕಪ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಸೋತಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ವಿಶ್ವ ತಂಡದ ಕೆವಿನ್‌ ಆ್ಯಂಡರ್ಸನ್‌ ಮತ್ತು ಜಾಕ್‌ ಸಾಕ್‌ 6–7, 6–3, 10–6ರಲ್ಲಿ ಫೆಡರರ್‌ ಮತ್ತು ನೊವಾಕ್‌ ಅವರನ್ನು ಮಣಿಸಿದರು. ಮೊದಲ ಬಾರಿಗೆ ಡಬಲ್ಸ್‌ ವಿಭಾಗದಲ್ಲಿ ಜೊತೆಯಾಗಿ ಆಡಿದ್ದ ಸ್ವಿಟ್ಜರ್‌ಲೆಂಡ್‌ನ ಫೆಡರರ್‌ ಮತ್ತು ಸರ್ಬಿಯಾದ ಜೊಕೊವಿಚ್‌ ಮೊದಲ ಸೆಟ್‌ನಲ್ಲಿ ಮೋಡಿ ಮಾಡಿದರು. ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಎರಡು (ರೋಜರ್‌) ಮತ್ತು ಮೂರನೇ (ನೊವಾಕ್‌) ಸ್ಥಾನಗಳಲ್ಲಿರುವ ಯೂರೋಪ್‌ನ ಜೋಡಿ ಶರವೇಗದ ಸರ್ವ್‌ ಮತ್ತು ಬಲಿಷ್ಠ ರಿಟರ್ನ್‌ಗಳ ಮೂಲಕ ಗೇಮ್‌ ಜಯಿಸಿತು. ಮೂರನೇ ಗೇಮ್‌ನ ವೇಳೆ ಜೊಕೊವಿಚ್‌ ಹಿಂತಿರುಗಿಸಿದ ಚೆಂಡು ನೆಟ್‌ನ ಸನಿಹದಲ್ಲಿದ್ದ ಫೆಡರರ್‌ ಅವರ ತಲೆಗೆ ಬಿತ್ತು. ಆಗ ಕ್ರೀಡಾಂಗಣದಲ್ಲಿ ಹಾಸ್ಯದ ಹೊನಲು ಹರಿಯಿತು. ಅನಂತರ ಈ ಜೋಡಿ ಮಿಂಚಿನ ಆಟ ಆಡಿ ಎದುರಾಳಿಗಳನ್ನು ಕಂಗೆಡಿಸಿತು. ಆರಂಭಿಕ ನಿರಾಸೆಯಿಂದ ಎದೆಗುಂದದ ಜಾಕ್‌ ಮತ್ತು ಆ್ಯಂಡರ್ಸನ್‌ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಮೂರನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ 4–4ರ ಸಮಬಲ ಕಂಡುಬಂತು. ಈ ಹಂತದಲ್ಲಿ ಫೆಡರರ್‌ ‘ಡಬಲ್‌ ಫಾಲ್ಟ್‌’ ಎಸಗಿದರು. ನಂತರ ಅಬ್ಬರಿಸಿದ ಜಾಕ್‌ ಮತ್ತು ಕೆವಿನ್‌ ಗೆಲುವಿನ ತೋರಣ ಕಟ್ಟಿದರು. ಇದಕ್ಕೂ ಮುನ್ನ ನಡೆದಿದ್ದ ಸಿಂಗಲ್ಸ್‌ ವಿಭಾಗದ ಮೂರು ಪಂದ್ಯಗಳಲ್ಲೂ ಯೂರೋಪ್‌ ತಂಡದ ಆಟಗಾರರು ಗೆದ್ದಿದ್ದರು. ಹೀಗಾಗಿ ಈ ತಂಡ 3–0ರ ಮುನ್ನಡೆ ಗಳಿಸಿತ್ತು. ಮೊದಲ ಸಿಂಗಲ್ಸ್‌ನಲ್ಲಿ ಗ್ರಿಗರ್‌ ಡಿಮಿತ್ರೋವ್‌ 6–1, 6–4ರಲ್ಲಿ ಫ್ರಾನ್ಸೆಸ್‌ ತಿಯಾಫೊ ಅವರನ್ನು ಮಣಿಸಿದರು. ನಂತರದ ಹಣಾಹಣಿಯಲ್ಲಿ ಕೈಲ್‌ ಎಡ್ಮಂಡ್‌ 6–4, 5–7, 10–6ರಲ್ಲಿ ಜಾಕ್‌ ಸಾಕ್‌ ವಿರುದ್ಧ ಗೆದ್ದರು. ಮೂರನೇ ಸಿಂಗಲ್ಸ್‌ನಲ್ಲಿ ಡೇವಿಡ್‌ ಗೊಫಿನ್‌ 6–4, 4–6, 11–9ರಲ್ಲಿ ಡೀಗೊ ಶ್ವಾರ್ಟ್ಜ್‌ಮನ್‌ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.