‘ವಿಶೇಷ ರ‍್ಯಾಂಕಿಂಗ್‌’ ಪದ್ಧತಿ: ಬದಲಾದ ನಿಯಮ, ಸೆರೆನಾ ಖುಷಿ ಅಬು ಧಾಬಿ: ವಿಶ್ವ ಟೆನಿಸ್ ಸಂಸ್ಥೆಯು 2019ರಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ‘ವಿಶೇಷ ರ‍್ಯಾಂಕಿಂಗ್‌’ ಪದ್ಧತಿಗೆ ಅಮೆರಿಕದ ಆಟಗಾರ್ತಿ, ಸೆರೆನಾ ವಿಲಿಯಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿಯಾದ ನಂತರ ಟೆನಿಸ್ ಅಂಗಣಕ್ಕೆ ಮರಳುವ ಆಟಗಾರ್ತಿಯರಿಗೆ ಹೊಸ ಪದ್ಧತಿಯಡಿ ವಿಶೇಷ ರ‍್ಯಾಂಕಿಂಗ್ ನೀಡಲಾಗುತ್ತದೆ. ಇದು ಅವರಿಗೆ ಶ್ರೇಯಾಂಕವನ್ನು ನೀಡಲು ಸಹಕಾರಿಯಾಗಲಿದೆ. ಸೆರೆನಾ, ವಿಕ್ಟೋರಿಯಾ ಅಜರೆಂಕಾ ಮೊದಲಾದವರು ತಾಯಿಯಾದ ನಂತರವೂ ಅಂಗಣಕ್ಕೆ ಇಳಿದಿದ್ದು ಇಂಥ ಪದ್ಧತಿ ಜಾರಿಗಾಗಿ ದನಿ ಎತ್ತಿದ್ದರು. ಇಲ್ಲಿ ಗುರುವಾರ ನಡೆದ ಸಹೋದರಿ ವೀನಸ್ ವಿಲಿಯಮ್ಸ್ ಅವರ ಪ್ರದರ್ಶನ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಸೆರೆನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಇದು ಅತ್ಯುತ್ತಮ ನಡೆ. ವಿವಾಹಿತ ಆಟಗಾರ್ತಿಯರಿಗೆ ಈ ಪದ್ಧತಿ ತುಂಬ ಖುಷಿ ನೀಡಲಿದೆ’ ಎಂದು ಪ್ರತಿಕ್ರಿಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.