ಡೇವಿಸ್ ಕಪ್ ಟೆನಿಸ್: ತಂಡಕ್ಕೆ ಮರಳಿದ ಶರಣ್, ಬಾಲಾಜಿಗೆ ಕೊಕ್ ಪುಣೆ: ಕೋಲ್ಕತ್ತದಲ್ಲಿ ಫೆಬ್ರುವರಿ 1 ಮತ್ತು 2 ರಂದು ಇಟಲಿ ತಂಡದ ಎದುರು ನಡೆಯಲಿರುವ ಡೇವಿಸ್‌ ಕಪ್ ಟೆನಿಸ್‌ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಶರಣ್ ದಿವಿಜ್ ಮರಳಿದ್ದಾರೆ. 2012ರಲ್ಲಿ ಅವರು ಡೆವಿಸ್‌ ಕಪ್‌ನಲ್ಲಿ ಆಡಿದ್ದರು. ನಂತರದ ವರ್ಷಗಳಲ್ಲಿ ಅವರು ಸ್ಥಾನ ಪಡೆದಿರಲಿಲ್ಲ. ಈ ಬಾರಿ ಅವರು ಆಡಲಿದ್ದಾರೆ. ಈಚೆಗೆ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಅವರು ಚಿನ್ನದ ಪದಕ ಗಳಿಸಿದ್ದರು. ರೋಹಿತ್ ರಾಜಪಾಲ್ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯು ಸೋಮವಾರ ತಂಡವನ್ನು ಪ್ರಕಟಿಸಿದೆ. ರ‍್ಯಾಂಕಿಂಗ್‌ ಆಧಾರದಲ್ಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹೋದ ಸಲ ಸರ್ಬಿಯಾ ವಿರುದ್ಧದ ಪಂದ್ಯದಲ್ಲಿ ಶರಣ್ ಅವರು ಗಾಯದ ಕಾರಣ ಹಿಂದೆ ಸರಿದಿದ್ದರು. ಪ್ರಮುಖ ಆಟಗಾರ ಯೂಕಿ ಬಾಂಭ್ರಿ ಅವರು ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಈ ಬಾರಿ ಅವರು ಕಣಕ್ಕಿಳಿಯುತ್ತಿಲ್ಲ. ಎನ್. ಶ್ರೀರಾಮ್ ಬಾಲಾಜಿ ಅವರನ್ನು ಕೈಬಿಡಲಾಗಿದೆ. ಅರ್ಜುನ್ ಖಾಡೆ ಅವರು ಕಾಯ್ದಿಟ್ಟ ಆಟಗಾರರಾಗಿದ್ದಾರೆ. ಕನ್ನಡಿಗ ರೋಹನ್ ಬೋಪಣ್ಣ ತಂಡದಲ್ಲಿದ್ದಾರೆ. ತಂಡ ಇಂತಿದೆ: ಪ್ರಜ್ಞೇಶ್ ಗುಣೇಶ್ವರನ್, ರಾಮಕುಮಾರ್ ರಾಮನಾಥನ್, ದಿವಿಜ್ ಶರಣ್, ರೋಹನ್ ಬೋಪಣ್ಣ, ಸಾಕೇತ್ ಮೈನೇನಿ, ಶಶಿಕುಮಾರ್ ಮುಕುಂದ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.