ಬೋಪಣ್ಣ–ದಿವಿಜ್ ಜೋಡಿಗೆ ಪ್ರಶಸ್ತಿ ಪುಣೆ: ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಜೋಡಿ ಅಮೋಘ ಆಟವಾಡಿ ಎಟಿಪಿ ಟೂರ್‌ನ ಚೊಚ್ಚಲ ಪ್ರಶಸ್ತಿ ಗೆದ್ದರು. ಇಲ್ಲಿ ಶನಿವಾರ ಮುಕ್ತಾಯಗೊಂಡ ಮಹಾರಾಷ್ಟ್ರ ಓಪನ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಬ್ರಿಟನ್‌ನ ಲೂಕ್‌ ಬ್ಯಾಂಬ್ರಿಜ್ ಮತ್ತು ಜಾನಿ ಒಮಾರ ಅವರನ್ನು ಬೋಪಣ್ಣ–ದಿವಿಜ್ ಜೋಡಿ 6–3, 6–4ರಿಂದ ಮಣಿಸಿತು. ಇದು ವೈಯಕ್ತಿಕವಾಗಿ ಬೋಪಣ್ಣ ಅವರ ಒಂಬತ್ತನೇ ಮತ್ತು ದಿವಿಜ್ ಅವರ ನಾಲ್ಕನೇ ಪ್ರಶಸ್ತಿಯಾಗಿದೆ. ಟೂರ್ನಿಯಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದ ಈ ಜೋಡಿ ಫೈನಲ್‌ನಲ್ಲಿ ನಿರಾಯಾಸವಾಗಿ ಎದುರಾಳಿಗಳನ್ನು ಮಣಿಸಿದರು. ಆರಂಭದಲ್ಲಿ ಸ್ವಲ್ಪ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡ ಎದುರಾಳಿಗಳನ್ನು ದಂಗುಬಡಿಸಿದರು. ಅಮೋಘ ಬ್ಯಾಕ್‌ಹ್ಯಾಂಡ್ ಹೊಡೆತಗಳು ಮತ್ತು ಮೋಹಕ ಸರ್ವ್‌ಗಳ ಮೂಲಕ ಮಿಂಚಿದ ಬೋಪಣ್ಣ ಪ್ರೇಕ್ಷಕರನ್ನು ರಂಜಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.