ಬೆಂಗಳೂರು ಓಪನ್‌ ಎಐಟಿಎ ರ‍್ಯಾಂಕಿಂಗ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಸೂರಜ್‌ ಬೆಂಗಳೂರು: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಕರ್ನಾಟಕದ ಸೂರಜ್‌ ಪ್ರಭೋದ್‌, ಬೆಂಗಳೂರು ಓಪನ್‌ ವೈಲ್ಡ್‌ ಕಾರ್ಡ್‌ ಎಐಟಿಎ ರ‍್ಯಾಂಕಿಂಗ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕೆಎಸ್‌ಎಲ್‌ಟಿಎ ಅಂಗಳದಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಗ್ರಶ್ರೇಯಾಂಕದ ಆಟಗಾರ ಸೂರಜ್‌ 6–3, 6–1 ನೇರ ಸೆಟ್‌ಗಳಿಂದ ದೆಹಲಿಯ ಯುಗಳ್‌ ಬನ್ಸಾಲ್‌ ಅವರನ್ನು ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಕರ್ನಾಟಕದ ಮೂರನೇ ಶ್ರೇಯಾಂಕದ ಆಟಗಾರ ಎಸ್‌.ಡಿ.ಪ್ರಜ್ವಲ್‌ ದೇವ್‌ 6–3, 6–2ರಲ್ಲಿ ಮಹಾರಾಷ್ಟ್ರದ ಸಾಹಿಲ್‌ ಗಾವರೆ ಎದುರು ಗೆದ್ದರು. ಕರ್ನಾಟಕದ ಮತ್ತೊಬ್ಬ ಆಟಗಾರ ಅರ್ಜುನ್‌ ಹೊನ್ನಪ್ಪ 3–6, 4–6ರಲ್ಲಿ ಪಂಜಾಬ್‌ನ ದಲ್ವಿಂದರ್‌ ಸಿಂಗ್‌ ವಿರುದ್ಧ ಸೋತರು. ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ತಮಿಳುನಾಡಿನ ಮೋಹಿತ್‌ ಮಯೂರ್‌ ಜಯಪ್ರಕಾಶ್‌ 7–6, 6–3ರಲ್ಲಿ ಪಂಜಾಬ್‌ನ ಪರಮವೀರ್‌ ಸಿಂಗ್‌ ಬಾಜ್ವಾ ವಿರುದ್ಧ ವಿಜಯಿಯಾದರು. ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಪ್ರಜ್ವಲ್‌ ದೇವ್‌ ಮತ್ತು ಮೋಹಿತ್‌ ಜಯಪ್ರಕಾಶ್‌ 6–4, 6–3ರಲ್ಲಿ ನಿಕಿತ್‌ ಎಂ.ರೆಡ್ಡಿ ಹಾಗೂ ರಿಷಿ ರೆಡ್ಡಿ ವಿರುದ್ಧವೂ, ಸೂರಜ್‌ ಪ್ರಭೋದ್‌ ಮತ್ತು ದಲ್ವಿಂದರ್‌ ಸಿಂಗ್‌ 6–3, 2–6, 10–4ರಲ್ಲಿ ಸಾಹಿಲ್‌ ಗಾವರೆ ಮತ್ತು ಪರಮವೀರ್‌ ಸಿಂಗ್‌ ಬಾಜ್ವಾ ವಿರುದ್ಧವೂ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.