ನೊವಾಕ್–ನಡಾಲ್‌ ಫೈನಲ್‌ ಪೈಪೋಟಿ ಮೆಲ್ಬರ್ನ್‌ : ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಈ ಪೈಪೋಟಿ ಭಾನುವಾರ ನಡೆಯಲಿದೆ. ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿರುವ ಉಭಯ ಆಟಗಾರರ ನಡುವಣ ಈ ಹೋರಾಟ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. 30 ವರ್ಷ ವಯಸ್ಸಿನ ನೊವಾಕ್‌, ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ 6–0, 6–2, 6–2 ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಲುಕಾಸ್‌ ಪೌವಿಲ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಏಳನೇ ಬಾರಿ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. ಆರು ಬಾರಿಯ ಚಾಂಪಿಯನ್‌ ಜೊಕೊವಿಚ್‌, ಒಂದು ಗಂಟೆ 23 ನಿಮಿಷಗಳ ಹಣಾಹಣಿಯಲ್ಲಿ ಪ್ರಾಬಲ್ಯ ಮೆರೆದರು. ಮೊದಲ ಸೆಟ್‌ನಲ್ಲಿ ಅಬ್ಬರಿಸಿದ ಸರ್ಬಿಯಾದ ಆಟಗಾರ, ತಾವು ಮಾಡಿದ ಸರ್ವ್‌ಗಳನ್ನು ಉಳಿಸಿಕೊಂಡರು. ಜೊತೆಗೆ ಎದುರಾಳಿಯ ಎಲ್ಲಾ ಸರ್ವ್‌ಗಳನ್ನು ಮುರಿದು ಸುಲಭವಾಗಿ ಸೆಟ್ ಕೈವಶ ಮಾಡಿಕೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ಗೆ, ಎರಡನೇ ಸೆಟ್‌ನ ಶುರುವಿನಲ್ಲಿ ಪೌವಿಲ್‌ ಪ್ರಬಲ ಪೈಪೋಟಿ ಒಡ್ಡಿದರು. ಹೀಗಾಗಿ 2–2 ಸಮಬಲ ಕಂಡುಬಂತು. ಈ ಹಂತದಲ್ಲಿ ನೊವಾಕ್‌ ಮೋಡಿ ಮಾಡಿದರು. ಶರವೇಗದ ಸರ್ವ್‌, ಆಕರ್ಷಕ ಬ್ಯಾಕ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ಮೂರನೇ ಸೆಟ್‌ನಲ್ಲೂ ಲುಕಾಸ್‌ ಮಂಕಾದರು. ಅವರು ಮೂರು ಬಾರಿ ‘ಡಬಲ್‌ ಫಾಲ್ಟ್‌’ ಎಸಗಿದರು. ಬಲಿಷ್ಠ ಕ್ರಾಸ್‌ಕೋರ್ಟ್‌ ಮತ್ತು ಬೇಸ್‌ಲೈನ್‌ ಹೊಡೆತಗಳ ಮೂಲಕ ಗೇಮ್‌ಗಳನ್ನು ಗೆದ್ದ ನೊವಾಕ್‌ ಖುಷಿಯ ಕಡಲಲ್ಲಿ ತೇಲಿದರು. ಈ ಪಂದ್ಯದಲ್ಲಿ ಜೊಕೊವಿಚ್‌, ಒಟ್ಟು ಆರು ಏಸ್‌ಗಳನ್ನು ಸಿಡಿಸಿದರು. ಏಳು ಬ್ರೇಕ್ ಪಾಯಿಂಟ್ಸ್‌ ಕಲೆಹಾಕಿ ಅಭಿಮಾನಿಗಳನ್ನು ರಂಜಿಸಿದರು. ಸಮಂತಾ–ಶೂಯಿಗೆ ಪ್ರಶಸ್ತಿ: ಮಹಿಳೆಯರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಸಮಂತಾ ಸೊಸುರ್‌ ಮತ್ತು ಚೀನಾದ ಜಾಂಗ್‌ ಶೂಯಿ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ಸಮಂತಾ ಮತ್ತು ಶೂಯಿ 6–3, 6–4 ನೇರ ಸೆಟ್‌ಗಳಿಂದ ಹಂಗರಿಯ ಟೈಮಿ ಬಾಬೊಸ್‌ ಮತ್ತು ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೋವಿಚ್‌ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.