ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ: ನವೊಮಿ ನಂಬರ್‌ ಒನ್‌ ಮೆಲ್ಬರ್ನ್‌: ಜಪಾನ್‌ನ ನವೊಮಿ ಒಸಾಕ, ಶನಿವಾರ ಟೆನಿಸ್‌ ಲೋಕದ ರಾಣಿಯಾಗಿ ಮೆರೆದರು. ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದರು. ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್‌ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ಹೊಸ ಮೈಲುಗಲ್ಲು ಸ್ಥಾ‍ಪಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟಕ್ಕೇರಿದ ಏಷ್ಯಾದ ಮೊದಲ ಆಟಗಾರ್ತಿ ಎಂಬ ಹಿರಿಮೆ ಅವರದ್ದಾಯಿತು. ಈ ಸ್ಥಾನಕ್ಕೇರಿದ ಅತಿ ಕಿರಿಯ ಆಟಗಾರ್ತಿ (2010ರ ನಂತರ) ಎಂಬ ಶ್ರೇಯಕ್ಕೂ ಅವರು ಭಾಜನರಾದರು. ರಾಡ್‌ ಲೇವರ್‌ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ ಒಸಾಕ 7–6, 5–7, 6–4ರಲ್ಲಿ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಪರಾಭವಗೊಳಿಸಿದರು. ಎರಡು ಗಂಟೆ 27 ನಿಮಿಷಗಳ ಹಣಾಹಣಿಯಲ್ಲಿ ಒಸಾಕ ಗೆಲುವಿನ ತೋರಣ ಕಟ್ಟಿದಾಗ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಅಂಗಳದಲ್ಲಿ ಮಂಡಿಯೂರಿ ಕುಳಿತ ಜಪಾನ್‌ನ ಆಟಗಾರ್ತಿ ಭಾವುಕರಾದರು. ಸಂತಸದಿಂದ ಅವರ ಕಣ್ಣುಗಳು ತುಂಬಿಬಂದವು. 21 ವರ್ಷ ವಯಸ್ಸಿನ ಒಸಾಕ, ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಗೆದ್ದ ಎರಡನೇ ಟ್ರೋಫಿ ಇದಾಗಿದೆ. ಇದಕ್ಕೂ ಮುನ್ನ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದರು. ಆಗ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿದ್ದರು. ನವೊಮಿ ಮತ್ತು ಕ್ವಿಟೋವಾ ಮೊದಲ ಸಲ ಮುಖಾಮುಖಿಯಾಗಿದ್ದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಗರಿಗೆದರಿತ್ತು. ಮೊದಲ ಸೆಟ್‌ನ ಆರಂಭದಲ್ಲಿ ಎಡಗೈ ಆಟಗಾರ್ತಿ ಪೆಟ್ರಾ ಮಿಂಚಿದರು. ಅವರು ಸಿಡಿಸುತ್ತಿದ್ದ ಶರವೇಗದ ಸರ್ವ್‌ಗಳನ್ನು ಹಿಂತಿರುಗಿಸಲು ನವೊಮಿ ಪರದಾಡಿದರು. ಬಳಿಕ ಲಯ ಕಂಡುಕೊಂಡ ಜಪಾನ್‌ನ ಆಟಗಾರ್ತಿ ದಿಟ್ಟ ಪೈಪೋಟಿ ನೀಡಿದರು. ಹೀಗಾಗಿ 6–6 ಸಮಬಲ ಕಂಡುಬಂತು. ಈ ಹಂತದಲ್ಲಿ ಜೆಕ್‌ ಗಣರಾಜ್ಯದ ಆಟಗಾರ್ತಿ ಮೂರು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕೈಚೆಲ್ಲಿದ್ದು ಅವರಿಗೆ ಮುಳುವಾಯಿತು. ‘ಟೈ ಬ್ರೇಕರ್‌’ನಲ್ಲಿ ಮಿಂಚಿದ ಒಸಾಕ, ಸೆಟ್‌ ಕೈವಶ ಮಾಡಿಕೊಂಡರು. ಆರಂಭಿಕ ನಿರಾಸೆಯಿಂದ ಜೆಕ್‌ ಗಣರಾಜ್ಯದ ಆಟಗಾರ್ತಿ ಎದೆಗುಂದಲಿಲ್ಲ. ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಅವರು ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು 2–0 ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಜಪಾನ್‌ನ ಆಟಗಾರ್ತಿ ‘ಡಬಲ್‌ ಫಾಲ್ಟ್ಸ್‌’ ಮಾಡಿದರು. ಇದರಿಂದಾಗಿ ಕ್ವಿಟೋವಾ ಗೆಲುವಿನ ಹಾದಿ ಸುಗಮವಾಯಿತು. ಚುರುಕಿನ ಡ್ರಾಪ್‌ಗಳ ಮೂಲಕ ಗೇಮ್‌ಗಳನ್ನು ಗೆದ್ದ ಅವರು ಎದುರಾಳಿಗೆ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು. ಹೀಗಾಗಿ ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ ಕುತೂಹಲದ ಗಣಿಯಾಗಿತ್ತು. ಈ ಸೆಟ್‌ನ ಆರಂಭದಿಂದಲೇ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಎಂಟು ಗೇಮ್‌ಗಳವರೆಗೂ ಪಂದ್ಯ ರೋಚಕತೆಯಿಂದ ಸಾಗಿತ್ತು. ನಂತರ ಒಸಾಕ ಆಧಿಪತ್ಯ ಸಾಧಿಸಿದರು. ಒಂಬತ್ತು ಮತ್ತು 10ನೇ ಗೇಮ್‌ಗಳಲ್ಲಿ ಅಬ್ಬರಿಸಿದ ಅವರು ಕ್ವಿಟೋವಾ ಅವರ ಪ್ರಶಸ್ತಿಯ ಕನಸನ್ನು ಭಗ್ನಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.