ಟೆನಿಸ್‌: ಫೈನಲ್‌ಗೆ ಪ್ರತಿಭಾ– ವಂಶಿತಾ ಬೆಂಗಳೂರು: ಅಗ್ರ ಶ್ರೇಯಾಂಕಿತೆ ಪ್ರತಿಭಾ ಪ್ರಸಾದ್‌ ಎಎನ್‌ಟಿ–ಎಐಟಿಎ ಟೆನಿಸ್‌ ಟೂರ್ನಿಯ ಬಾಲಕಿ‌ಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ವಂಶಿತಾ ಪಠಾಣಿಯಾ ಅವರನ್ನು ಎದುರಿಸಲಿದ್ದಾರೆ. ಪ್ರಶಸ್ತಿ ಸುತ್ತಿನ ಹಣಾಹಣಿ ಶುಕ್ರವಾರ ನಡೆಯಲಿದೆ. ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಪ್ರತಿಭಾ, ಎರಡು ಮತ್ತು ಮೂರನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. 5–7, 7–5, 6–2ರಿಂದ ತಮಿಳುನಾಡಿನ ಆರತಿ ಮುನಿಯನ್‌ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ವಂಶಿತಾ 6–3, 6–3ರಿಂದ ಅವಂತಿಕಾ ಸಾಯಿ ಅವರನ್ನು ಸೋಲಿಸಿದರು. ಬಾಲಕರ ಸಿಂಗಲ್ಸ್‌ನಲ್ಲಿ ಆಂಧ್ರಪ್ರದೇಶದ ನಿಖಿತ್‌ ರೆಡ್ಡಿ, 6–3, 6–2ರಿಂದ ಕವಿನ್‌ ಮಸಿಲಾಮಣಿ ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಭರತ್‌ 6–4, 5–7, 6–4 ರಿಂದ ದಕ್ಷಿಣೇಶ್ವರ್‌ ಸುರೇಶ್‌ ಅವರನ್ನು ಸೋಲಿಸಿದರು. ಸುರೇಶ್‌–ಮೇಘ್‌ ಜೋಡಿಗೆ ಪ್ರಶಸ್ತಿ: ಬಾಲಕರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಡಿ. ಸುರೇಶ್‌–ಮೇಘ್‌ ಪಟೇಲ್‌ ಜೋಡಿ ಭರತ್‌ ನಿಶೋಕ್‌ ಕುಮಾರ್‌– ಕವಿನ್‌ ಮಸಿಲಾಮಣಿ ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.