ಸೆಮಿಫೈನಲ್‌ಗೆ ನಿಕ್ಷೇಪ್‌ ಮೈಸೂರು: ಸೊಗಸಾದ ಆಟವಾಡಿದ ಕರ್ನಾಟಕದ ಬಿ.ಆರ್‌.ನಿಕ್ಷೇಪ್‌, ಆರೆಂಜ್‌ ಸ್ಪೋರ್ಟ್ಸ್‌ ಮತ್ತು ಮೈಸೂರು ಟೆನಿಸ್‌ ಕ್ಲಬ್‌ ಆಶ್ರಯದಲ್ಲಿ ನಡೆಯುತ್ತಿರುವ ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಮೈಸೂರು ಟೆನಿಸ್‌ ಕ್ಲಬ್‌ ಕೋರ್ಟ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಿಕ್ಷೇಪ್ 6–1, 6–2 ರಲ್ಲಿ ಸ್ಥಳೀಯ ಆಟಗಾರ ಆರ್ಣವ್ ಪತಂಗೆ ಅವರನ್ನು ಮಣಿಸಿದರು. ಗುರುವಾರ ನಡೆಯಲಿರುವ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಜತಿನ್‌ ದಹಿಯಾ ವಿರುದ್ಧ ಪೈಪೋಟಿ ನಡೆಸುವರು. ದಹಿಯಾ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 6–3, 6–1 ರಲ್ಲಿ ರಂಜನ್‌ ಗುಹನ್‌ ವಿರುದ್ಧ ಗೆದ್ದರು. ಹಿಂದೆ ಸರಿದ ಪ್ರಜ್ವಲ್‌: ಸ್ಥಳೀಯ ಆಟಗಾರ ಪ್ರಜ್ವಲ್‌ ದೇವ್‌ ಅವರ ಸೆಮಿಫೈನಲ್‌ ಪ್ರವೇಶದ ಕನಸು ಭಗ್ನಗೊಂಡಿತು. ರಿಷಿ ರೆಡ್ಡಿ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ತೋಳಿನ ಸ್ನಾಯುಸೆಳೆತಕ್ಕೆ ಒಳಗಾಗಿ ಅರ್ಧದಲ್ಲೇ ಪಂದ್ಯ ಬಿಟ್ಟುಕೊಟ್ಟರು. ಮೊದಲ ಸೆಟ್‌ ಅನ್ನು 6–2 ರಲ್ಲಿ ಗೆದ್ದ ಪ್ರಜ್ವಲ್‌, ಎರಡನೇ ಸೆಟ್‌ನಲ್ಲಿ 6–7 ರಲ್ಲಿ ಸೋಲು ಅನುಭವಿಸಿದರು. ಗಾಯದ ಕಾರಣ ಮೂರನೇ ಸೆಟ್‌ ಆಡಲಿಲ್ಲ. ಸೆಮಿಫೈನಲ್‌ನಲ್ಲಿ ರಿಷಿ ರೆಡ್ಡಿ ಅವರು ಸುರೇಶ್‌ ದಕ್ಷಿಣ್‌ ಅವರನ್ನು ಎದುರಿಸುವರು. ಸುರೇಶ್‌ 6–2, 6–3 ರಲ್ಲಿ ವಿ.ವಿಘ್ನೇಶ್ ವಿರುದ್ಧ ಜಯ ಸಾಧಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.