ರಾಷ್ಟ್ರೀಯ 50–ಕೆ ಟೆನಿಸ್‌ ಟೂರ್ನಿ: ಎಂಟರ ಘಟ್ಟಕ್ಕೆ ನಿಕ್ಷೇಪ್‌, ಆರ್ಯನ್‌ ದಾವಣಗೆರೆ: ಮೂರನೇ ಶ್ರೇಯಾಂಕಿತ ಆಟಗಾರ ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಇಲ್ಲಿ ನಡೆಯುತ್ತಿರುವ ಎಂ.ಪಿ. ರವೀಂದ್ರ ಸ್ಮಾರಕ ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌ ಟೂರ್ನಿಯ ಎಂಟರ ಘಟ್ಟಕ್ಕೆ ಪ್ರವೇಶಿಸಿದರು. ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌, ಹೂವಿನಹಡಗಲಿಯ ರಂಗಭಾರತಿ ಮತ್ತು ಕರ್ನಾಟಕ ಟೆನಿಸ್‌ ಪ್ಲೇಯರ್ಸ್‌ ಪೇರೆಂಟ್ಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಜಿಲ್ಲಾ ಟೆನಿಸ್‌ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ. ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಆಕರ್ಷಕ ಆಟ ಪ್ರದರ್ಶಿಸಿದ ಮೈಸೂರಿನ ಆರ್ಯನ್‌ ಪತಂಗೆ, ಬೆಂಗ ಳೂರಿನ ಶಾಹುಲ್‌ ಅನ್ವರ್‌ ಅವರೂಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟರು. ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ನಿಕ್ಷೇಪ್ 6–0, 6–4ರ ನೇರ ಸೆಟ್‌ ಗಳಿಂದ ತಮಿಳುನಾಡಿನ ಸೂರ್ಯ ರೆಡ್ಡಿ ಅವರನ್ನು ಮಣಿಸಿದರು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ನಿಕ್ಷೇಪ್‌, ಮೊದಲ ಸೆಟ್‌ನಲ್ಲಿ ಎದುರಾಳಿಗೆ ಯಾವುದೇ ರೀತಿಯ ಅವಕಾಶ ನೀಡದೆ ಮೂರು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–0ಯಲ್ಲಿ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಸೂರ್ಯ ರೆಡ್ಡಿ ಸ್ಪರ್ಧೆ ಒಡ್ಡಿ ದರೂ ಅಳುಕದ ನಿಕ್ಷೇಪ್‌, ‘ಏಸ್‌’ ಹಾಗೂ ಆಕರ್ಷಕ ಪ್ಲೇಸ್‌ಮೆಂಟ್‌ ಅಸ್ತ್ರಗಳನ್ನು ಪ್ರಯೋಗಿಸಿದರು. ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ ಗೆದ್ದರು. ಭಾರಿ ಕುತೂಹಲ ಮೂಡಿಸಿದ ಇನ್ನೊಂದು ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ ಶಾಹುಲ್‌ ಅನ್ವರ್‌ 6–3, 3–6, 6–4ರಲ್ಲಿ ಏಳನೇ ಶ್ರೇಯಾಂಕಿತ ಆಟಗಾರ ತೆಲಂಗಾಣದ ಹೇವಂತ್‌ ಕುಮಾರ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ ಅನ್ನು ಸುಲಭದಲ್ಲಿ ಗೆದ್ದುಕೊಂಡಿದ್ದ ಶಾಹುಲ್‌, ಎರಡನೇ ಸೆಟ್‌ನಲ್ಲಿ ತಾಳ್ಮೆ ಕಳೆದುಕೊಂಡರು. ಎದುರಾಳಿಯು ಹಲವು ಬಾರಿ ರಿಟರ್ನ್‌ ಮಾಡಿದಾಗ ತಲೆಯ ಮೇಲೆ ಬಂದ ಚೆಂಡನ್ನು ಹೊರಗೆ ಹೊಡೆದ ಪರಿಣಾಮ 3–6ರಲ್ಲಿ ಸೆಟ್‌ ಅನ್ನು ಕಳೆದುಕೊಳ್ಳಬೇಕಾಯಿತು. ಅಂತಿಮ ಸೆಟ್‌ನಲ್ಲಿ ಶಾಹುಲ್‌ ಎದೆಗುಂದದೆ ಹೋರಾ ಡಿದರು. ಇದೇ ಕ್ರೀಡಾಂಗಣದಲ್ಲಿ ಕಳೆದ ವರ್ಷ ನಡೆದಿದ್ದ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ತಮ್ಮನ್ನು ಸೋಲಿಸಿದ್ದ ಹೇವಂತ್‌ ಅವರನ್ನು ಮಣಿಸಿದರು. ಮೈಸೂರಿನ ಆರ್ಯನ್‌ ಪತಂಗೆ 6–0, 6–2ರಲ್ಲಿ ನೇರ ಸೆಟ್‌ಗಳಿಂದ ಪಶ್ಚಿಮ ಬಂಗಾಳದ ಅಮಿತ್‌ ರಾವುತ್‌ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಮೂರು ಗೇಮ್‌ಗಳನ್ನು ಹಾಗೂ ಎರಡನೇ ಸೆಟ್‌ನಲ್ಲಿ ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿದರು. ದಾವಣಗೆರೆಯ ಅಮರ್‌ ಧರಿಯಣ್ಣವರ್‌ ತೀವ್ರ ಸ್ಪರ್ಧೆ ಒಡ್ಡಿದರೂ 4–6, 6–7 (9)ರಲ್ಲಿ ತೆಲಂಗಾಣದ ಸಾಜಿದ್‌ ರೆಹಮಾನ್‌ ವಿರುದ್ಧ ಸೋತರು. ಬೆಂಗಳೂರಿನ ನೇಸರ ಜೇವೂರ 7–5, 6–4ರಲ್ಲಿ ತಮಿಳುನಾಡಿನ ವಿ. ರೋಹಿತ್‌ ವಿರುದ್ಧ; ಬೆಂಗಳೂರಿನ ಅರ್ಜುನ್‌ ಶ್ರೀರಾಮ್‌ 6–4, 6–1ರಲ್ಲಿ ತೆಲಂಗಾಣದ ಎ.ಕೆ. ರೋಹಿತ್‌ ಎದುರು; ಅಸ್ಸಾಂನ ಶೇಖ್‌ ಇಫ್ತಾರ್‌ ಎಂ. 7–6(2), 6–3ರಲ್ಲಿ ಮಹಾರಾಷ್ಟ್ರದ ಖಾದ್ರಿ ಫಯಾಜ್‌ ಹುಸೇನ್‌ ವಿರುದ್ಧ ಮತ್ತು ತೆಲಂಗಾಣದ ತಹಾ ಕಪಾಡಿಯಾ 6–2, 6–1ರಲ್ಲಿ ಆಂಧ್ರಪ್ರದೇಶದ ಬಾಬಜಿ ಅತ್ತೂರು ಎದುರು ಗೆದ್ದರು. ಡಬಲ್ಸ್‌ ಫಲಿತಾಂಶ: ಪುರುಷರ ಡಬಲ್ಸ್‌ನ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಪಿ. ಆರ್ಯನ್‌ – ಅರ್ಜುನ್‌ ಶ್ರೀರಾಮ್‌ 6–2, 6–0ರಲ್ಲಿ ಕೆ. ವಿನಾಯಕ – ಸಿ. ಸಚಿನ್‌ ಎದುರು; ತಥಾಗತ್ ಚರಂತಿಮಠ–ವಿ. ರೋಹಿತ್‌ 3–6, 6–4, (10–6)ರಲ್ಲಿ ಸೂರ್ಯ ರೆಡ್ಡಿ–ವಿನಯ್‌ ಕುಮಾರ್‌ ವಿರುದ್ಧ; ಎ.ಕೆ. ರೋಹಿತ್‌– ಹೇವಂತ್‌ ಕುಮಾರ್‌ 6–3, 6–1ರಲ್ಲಿ ಅಮರ್‌ ಧರಿಯಣ್ಣವರ್‌– ಕೆ. ಬಸವರಾಜ್‌ ಎದುರು ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.