ರಾಷ್ಟ್ರೀಯ 50–ಕೆ ಟೆನಿಸ್‌ ಟೂರ್ನಿ: ಫೈನಲ್‌ಗೆ ನಿಕ್ಷೇಪ್‌, ತಹಾ ದಾವಣಗೆರೆ: ಬೆಂಗಳೂರಿನ ಬಿ.ಆರ್‌. ನಿಕ್ಷೇಪ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ 50–ಕೆ ಪುರುಷರ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು. ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌, ಹೂವಿನಹಡಗಲಿಯ ರಂಗಭಾರತಿ ಮತ್ತು ಕರ್ನಾಟಕ ಟೆನಿಸ್‌ ಪ್ಲೇಯರ್ಸ್‌ ಪೇರೆಂಟ್ಸ್‌ ಅಸೋಸಿಯೇಷನ್‌ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಸೆಮಿಫೈನಲ್‌ನಲ್ಲಿ ನಿಕ್ಷೇಪ್‌ 6–2, 6–3ರಲ್ಲಿ ಮೈಸೂರಿನ ಆರ್ಯನ್‌ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ 16 ವರ್ಷದೊಳಗಿನ ಬಾಲಕರ ವಿಭಾಗದ ಆಟಗಾರ ಅರ್ಜುನ್‌ ವಿರುದ್ಧ ನಿಕ್ಷೇಪ್‌ ಪ್ರಯಾಸದ ಜಯ ಸಾಧಿಸಿದ್ದರು. ಹೀಗಾಗಿ ಸೆಮಿಫೈನಲ್‌ನಲ್ಲಿ ಎದುರಾಳಿಗೆ ಯಾವುದೇ ರೀತಿಯ ಅವಕಾಶ ನೀಡದೆ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ಮೊದಲ ಸೆಟ್‌ನ ಆರಂಭದಲ್ಲಿ ಇಬ್ಬರೂ ತಲಾ ಒಂದೊಂದು ಗೇಮ್‌ ಗೆದ್ದುಕೊಂಡಿದ್ದರು. ಆಕರ್ಷಕ ಸರ್ವ್‌ ಹಾಗೂ ಉತ್ತಮ ಪ್ಲೇಸ್‌ಮೆಂಟ್‌ಗಳಿಂದಾಗಿ ಮೂರು ಗೇಮ್‌ಗಳನ್ನು ತಮ್ಮದಾಗಿಸಿಕೊಂಡ ನಿಕ್ಷೇಪ್‌ 4–1ರಲ್ಲಿ ಮುನ್ನಡೆ ಸಾಧಿಸಿದರು. ನಂತರದ ಒಂದು ಗೇಮ್‌ ಆರ್ಯನ್‌ಗೆ ಒಲಿಯಿತು. ಆದರೆ, ನಿಕ್ಷೇಪ್‌ ಎದುರಾಳಿಗೆ ಮತ್ತೆ ಅವಕಾಶ ನೀಡದೆ ಸತತ ಎರಡು ಗೇಮ್‌ಗಳೊಂದಿಗೆ ಮೊದಲ ಸೆಟ್‌ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲೂ ಆತ್ಮವಿಶ್ವಾಸದಿಂದ ದಾಳಿ ನಡೆಸಿದ ನಿಕ್ಷೇಪ್‌, ಸತತ ಎರಡು ಬ್ರೇಕ್‌ಗಳೊಂದಿಗೆ ನಾಲ್ಕು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು 4–0ರಲ್ಲಿ ಗೆಲುವಿನ ಗುರಿಯತ್ತ ನುಗ್ಗಿದರು. ಸೋಲಿನ ಬಾಗಿಲ ಬಳಿ ನಿಂತಿದ್ದ ಆರ್ಯನ್‌ ಸ್ವಲ್ಪ ಚೇತರಿಸಿಕೊಂಡು ಎರಡು ಬ್ರೇಕ್‌ ಮಾಡಿ ಮುಂದಿನ ಮೂರು ಗೇಮ್‌ಗಳನ್ನು ಗೆದ್ದುಕೊಂಡರು. ಆದರೆ, ನಿಕ್ಷೇಪ್‌, ಇನ್ನೊಂದು ಗೇಮ್‌ ಬ್ರೇಕ್‌ ಮಾಡಿದರು. ಆಕರ್ಷಕ ಸರ್ವ್‌ ಮಾಡಿ ಕೊನೆಯ ಗೇಮ್‌ ಅನ್ನೂ ತಮ್ಮದಾಗಿಸಿಕೊಂಡ ನಿಕ್ಷೇಪ್‌ ಸಂಭ್ರಮಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಆಂಧ್ರಪ್ರದೇಶದ ಸಾಜಿದ್‌ ರೆಹಮಾನ್‌ ಅವರು ಭುಜದ ನೋವಿನಿಂದ ಮೊದಲ ಸೆಟ್‌ನಲ್ಲಿ ಆಟದಿಂದ ಹಿಂದೆ ಸರಿದ ಪರಿಣಾಮ ತೆಲಂಗಾಣದ ತಹಾ ಕಪಾಡಿಯಾ ಫೈನಲ್‌ ಪ್ರವೇಶಿಸಿದರು. ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದ ತಹಾ ಕಪಾಡಿಯಾ ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ 4–1ರಲ್ಲಿ ಮುನ್ನಡೆ ಸಾಧಿಸಿದ್ದರು. ಡಬಲ್ಸ್‌ ಫಲಿತಾಂಶ: ಪುರುಷರ ಡಬಲ್ಸ್‌ ಸೆಮಿಫೈನಲ್‌ನಲ್ಲಿ ಅಲೋಕ್‌ ಆರಾಧ್ಯ–ರಿಭವ್‌ ರವಿಕಿರಣ್‌ 2–6, 7–6(7), (10–3)ರಲ್ಲಿ ಶೇಖ್‌ ಉಮೇರ್‌–ಶೇಖ್‌ ಇಫ್ತಿಯಾರ್‌ ಮಹಮ್ಮದ್‌ ಅವರನ್ನು ಮಣಿಸಿ ಫೈನಲ್‌ ಪ್ರವೇಶಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ತಹಾ ಕಪಾಡಿಯಾ–ಫಯಾಜ್‌ ಹುಸೇನ್‌ 6–2, 1–6, (12–10)ರಲ್ಲಿ ಬಿ.ಆರ್‌. ನಿಕ್ಷೇಪ್‌–ನೇಸರ ಜೇವೂರ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.