ಪ್ರೀ ಕ್ವಾರ್ಟರ್‌ಗೆ ಫೆಡರರ್‌ ಮಿಯಾಮಿ: ಅಪೂರ್ವ ಆಟ ಆಡಿದ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಹದಿನಾರರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಫೆಡರರ್‌ 7–5, 6–3 ನೇರ ಸೆಟ್‌ಗಳಿಂದ ಸರ್ಬಿಯಾದ ಫಿಲಿಪ್‌ ಕ್ರಾಜಿನೋವಿಚ್‌ ಎದುರು ಗೆದ್ದರು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಫೆಡರರ್‌, ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ಇದರ ನಡುವೆಯೂ ಗುಣಮಟ್ಟದ ಆಟ ಆಡಿ ಗೆಲುವಿನ ತೋರಣ ಕಟ್ಟಿದರು. ಎರಡನೇ ಸೆಟ್‌ನಲ್ಲೂ ಸ್ವಿಟ್ಜರ್‌ಲೆಂಡ್‌ನ ಆಟಗಾರ ಪರಿಣಾಮಕಾರಿ ಸಾಮರ್ಥ್ಯ ತೋರಿದರು.ಮುಂದಿನ ಸುತ್ತಿನಲ್ಲಿ ಫೆಡರರ್, ರಷ್ಯಾದ ಡೇನಿಯಲ್‌ ಮೆಡ್ವೆದೇವ್‌ ಎದುರು ಸೆಣಸಲಿದ್ದಾರೆ. ಮೂರನೇ ಸುತ್ತಿನ ಇನ್ನೊಂದು ಪೈಪೋಟಿ ಯಲ್ಲಿಮೆಡ್ವೆದೇವ್‌ 7–6, 6–7, 7–6ರಲ್ಲಿ ರೀಲಿ ಒಪೆಲ್ಕಾ ಅವರನ್ನು ಸೋಲಿಸಿದರು. ಇತರ ಪಂದ್ಯಗಳಲ್ಲಿ ಕೆವಿನ್‌ ಆ್ಯಂಡರ್‌ಸನ್‌ 6–4, 7–6ರಲ್ಲಿ ಜಾವೊ ಸೌಸಾ ಎದುರೂ, ಜೋರ್ಡನ್‌ ಥಾಂಪ್ಸನ್‌ 7–5, 7–5ರಲ್ಲಿ ಗ್ರಿಗರ್‌ ಡಿಮಿಟ್ರೋವ್‌ ಮೇಲೂ, ಡೆನಿಶ್‌ ಶಪೊವಲೋವ್‌ 6–3, 7–6ರಲ್ಲಿ ಆ್ಯಂಡ್ರೆ ರುಬಲೇವ್‌ ವಿರುದ್ಧವೂ, ಡೇವಿಡ್‌ ಗೊಫಿನ್‌ 6–4, 6–4ರಲ್ಲಿ ಮಾರ್ಕೊ ಸೆಚ್ಚಿನಾಟೊ ಮೇಲೂ ಗೆದ್ದರು. ಕ್ವಾರ್ಟರ್‌ಗೆ ಸಿಮೊನಾ: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ರುಮೇನಿಯಾದ ಸಿಮೊನಾ ಹಲೆಪ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಸಿಮೊನಾ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 6–3, 6–3 ನೇರ ಸೆಟ್‌ಗಳಿಂದ ಅಮೆರಿಕದ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸಿದರು. ಇತರ ಪಂದ್ಯಗಳಲ್ಲಿ ಹ್ಸಿ ಸು ವೀ 6–3, 6–7, 6–2ರಲ್ಲಿ ಕ್ಯಾರೋಲಿನ್‌ ವೋಜ್ನಿಯಾಕಿ ಎದುರೂ, ಪೆಟ್ರಾ ಕ್ವಿಟೋವಾ 6–3, 6–3ರಲ್ಲಿ ಕ್ಯಾರೋಲಿನ್‌ ಗಾರ್ಸಿಯಾ ಮೇಲೂ, ಆ್ಯಷ್ಲೆ ಬಾರ್ಟಿ 4–6, 6–3, 6–2ರಲ್ಲಿ ಕಿಕಿ ಬರ್ಟೆನ್ಸ್‌ ವಿರುದ್ಧವೂ, ವಾಂಗ್‌ ಕ್ವಿಯಾಂಗ್‌ 7–5, 6–4ರಲ್ಲಿ ವಾಂಗ್‌ ಯಫಾನ್‌ ಮೇಲೂ ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.