ಪ್ಲಿಸ್ಕೋವಗೆ ಆಘಾತ ನೀಡಿದ ಪೆಟ್ರಾ ಪ್ಯಾರಿಸ್ : ಕ್ರೊವೇಷ್ಯಾದ ಪೆಟ್ರಾ ಮಾರ್ಟಿಚ್ ಅವರಿಗೆ ನೇರ ಸೆಟ್‌ಗಳಿಂದ ಮಣಿದ ಚೆಕ್ ಗಣರಾಜ್ಯದ ಕರೊಲಿನಾ ಪ್ಲಿಸ್ಕೋವ, ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು. ಶುಕ್ರವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಪೆಟ್ರಾ 6–3, 6–3ರಲ್ಲಿ ಗೆದ್ದು ಸಂಭ್ರಮಿಸಿದರು. 31ನೇ ಶ್ರೇಯಾಂಕದ ಪೆಟ್ರಾ ಎದುರು ಎರಡನೇ ಶ್ರೇಯಾಂಕದ ಆಟಗಾರ್ತಿ ಸಪ್ಪೆಯಾದರು. ಸ್ವಯಂ ತಪ್ಪುಗಳು ಅವರಿಗೆ ಮಾರಕವಾದವು. ಇದು ಪೆಟ್ರಾ ಅವರಿಗೆ ಈ ವರ್ಷದಲ್ಲಿ 14ನೇ ಗೆಲುವು. ಆವೆಮಣ್ಣಿನ ಅಂಗಣದಲ್ಲಿ ಮಹಿಳಾ ವಿಭಾಗದಲ್ಲಿ ಇದು ದಾಖಲೆಯಾಗಿದೆ. ಒಂದೇ ಒಂದು ಗ್ರ್ಯಾನ್‌ಸ್ಲ್ಯಾಂ ಪ್ರಶಸ್ತಿ ಗಳಿಸಲು ಸಾಧ್ಯವಾಗದ ಪ್ಲಿಸ್ಕೋವ ಭಾರಿ ನಿರೀಕ್ಷೆಯೊಂದಿಗೆ ಇಲ್ಲಿಗೆ ಬಂದಿಳಿದಿದ್ದರು. ಎರಡು ಸುತ್ತುಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ಅವರು ಈ ಪಂದ್ಯದ ಆರಂಭದಲ್ಲೇ 3–5 ಹಿನ್ನಡೆ ಅನುಭವಿಸಿದರು. ನಂತರ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಟ್ಟು 28 ಸ್ವಯಂಕೃತ ತಪ್ಪುಗಳನ್ನು ಎಸಗಿದ ಅವರು ಅದಕ್ಕೆ ತಕ್ಕ ‘ಫಲ’ ಉಂಡರು. ಮುಗುರುಜಾಗೆ ಗೆಲುವು: ಸ್ಪೇನ್‌ನ ಗಾರ್ಬೈನ್ ಮುಗುರುಜಾ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಎದುರು 6–3, 6–3ರಲ್ಲಿ ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು. ಒಂಬತ್ತನೇ ಶ್ರೇಯಾಂಕದ ಸ್ಟಿಟೋಲಿನಾಗೆ 19ನೇ ಶ್ರೇಯಾಂಕದ ಮುಗುರುಜಾ ತಂತ್ರಗಳಿಗೆ ಉತ್ತರಿಸಲು ಆಗಲಿಲ್ಲ. ಬೇಸ್‌ಲೈನ್‌ನಲ್ಲಿ ‘ಲಂಗರು’ ಹಾಕಿ ಆಡಲು ಆರಂಭಿಸಿದ ಮುಗುರುಜಾ ಆರಂಭದಲ್ಲೇ ಎದುರಾಳಿಗೆ ಆಘಾತ ನೀಡಿದರು. ಈ ಆಘಾತದಿಂದ ಮೇಲೇಳಲು ಎಲಿನಾಗೆ ಸಾಧ್ಯವಾಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.