ಟೆನಿಸ್‌: ಪ್ರೀ ಕ್ವಾರ್ಟರ್‌ಗೆ ಬೋಪಣ್ಣ–ಕಾಪಿಲ್‌ ಪ್ಯಾರಿಸ್‌: ಭಾರತದ ರೋಹನ್‌ ಬೋಪಣ್ಣ ಮತ್ತು ರುಮೇನಿಯಾದ ಮಾರಿಯಸ್‌ ಕಾಪಿಲ್‌ ಅವರು ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಬೋಪಣ್ಣ ಮತ್ತು ಕಾಪಿಲ್‌ 6–4, 6–4 ನೇರ ಸೆಟ್‌ಗಳಿಂದ ಬೆಂಜಮಿನ್‌ ಬೊಂಜಿ ಮತ್ತು ಆ್ಯಂಟೋಯಿನ್‌ ಹಾವೊಂಗ್‌ ಎದುರು ಗೆದ್ದರು. ಈ ಹೋರಾಟ ಒಂದು ಗಂಟೆ 11 ನಿಮಿಷ ನಡೆಯಿತು. ಭಾರತ ಮತ್ತು ರುಮೇನಿಯಾದ ಜೋಡಿ ಎರಡು ಸೆಟ್‌ಗಳಲ್ಲೂ ಪರಿಣಾಮಕಾರಿ ಆಟ ಆಡಿ ನಿರಾಯಾಸವಾಗಿ ಗೆಲುವಿ ತೋರಣ ಕಟ್ಟಿತು. ಮುಂದಿನ ಸುತ್ತಿನಲ್ಲಿ ಬೋಪಣ್ಣ ಮತ್ತು ಕಾಪಿಲ್‌, ಸರ್ಬಿಯಾದ ದುಸಾನ್‌ ಲಾಜೊವಿಚ್‌ ಮತ್ತು ಜಾಂಕೊ ತಿಪ್ಸರೆವಿಚ್‌ ಎದುರು ಸೆಣಸಲಿದ್ದಾರೆ. ದಿವಿಜ್‌ ಜೋಡಿಗೆ ಸೋಲು: ಭಾರತದ ದಿವಿಜ್‌ ಶರಣ್‌ ಮತ್ತು ಬ್ರೆಜಿಲ್‌ನ ಮಾರ್ಷೆಲೊ ಡೆಮೋಲಿನರ್‌ ಅವರು ಎರಡನೇ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದರು. ದಿವಿಜ್‌ ಮತ್ತು ಮಾರ್ಷೆಲೊ 3–6, 4–6 ನೇರ ಸೆಟ್‌ಗಳಿಂದ ಎಂಟನೇ ಶ್ರೇಯಾಂಕದ ಆಟಗಾರರಾದ ಹೆನ್ರಿ ಕೊಂಟಿನೆನ್‌ ಮತ್ತು ಜಾನ್‌ ಪೀರ್ಸ್‌ ಎದುರು ಸೋತರು. ಈ ಹೋರಾಟ 60 ನಿಮಿಷ ನಡೆಯಿತು. ಭಾರತ ಮತ್ತು ಬ್ರೆಜಿಲ್‌ನ ಜೋಡಿ ಎರಡು ಬಾರಿ ಸರ್ವ್‌ ಕಳೆದುಕೊಂಡು ಸಂಕಷ್ಟ ಎದುರಿಸಿತು. ಈ ಜೋಡಿ ಮ್ಯೂನಿಚ್‌ನಲ್ಲಿ ನಡೆದಿದ್ದ ಬಿಎಂಡಬ್ಲ್ಯು ಓಪನ್‌ನಲ್ಲಿ ರನ್ನರ್ಸ್‌ ಅಪ್‌ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.