ಬಾರ್ಸಿಲೋನ ಓಪನ್‌: ಕ್ವಾರ್ಟರ್ ಫೈನಲ್‌ಗೆ ನಿಶಿಕೋರಿ ಬಾರ್ಸಿಲೋನ (ಎಎಫ್‌ಪಿ): ಕೆನಡಾದ ಫೆಲಿಕ್ಸ್ ಅಗರ್‌ ಅಲಿಯಾಸಿಮ್ ಎದುರು ನೇರ ಸೆಟ್‌ಗಳಿಂದ ಗೆದ್ದ ಜಪಾನ್‌ನ ಕೀ ನಿಶಿಕೋರಿ ಬಾರ್ಸಿಲೋನ ಓಪನ್‌ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ನಿಶಿಕೋರಿ 6–1, 6–3ರಲ್ಲಿ ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ನಿಶಿಕೋರಿ ಕಳೆದ ವಾರ ನಡೆದಿದ್ದ ಮಾಂಟೆ ಕಾರ್ಲೊ ಓಪನ್‌ನ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು. 31ನೇ ರ‍್ಯಾಂಕಿಂಗ್‌ನ ಫೆಲಿಕ್ಸ್ ಅಗರ್‌ ಎದುರು ಗುರುವಾರ ಅಮೋಘ ಆಟವಾಡಿದರು. ಮೊದಲ ಸೆಟ್‌ನಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದ ನಿಶಿಕೋರಿ ಎರಡನೇ ಸೆಟ್‌ನಲ್ಲಿ ಸ್ವಲ್ಪ ಪ್ರತಿರೋಧ ಎದುರಿಸಿದರು. ನಾಲ್ಕನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದ ನಂತರ ಫೆಲಿಕ್ಸ್ ಅಗರ್‌ ತಿರುಗೇಟು ನೀಡಿದರು. ಮುಂದಿನ ಗೇಮ್‌ನಲ್ಲಿ ಐದು ಬ್ರೇಕ್ ಪಾಯಿಂಟ್‌ಗಳನ್ನು ಕಲೆ ಹಾಕಿ ನಿಶಿಕೋರಿಗೆ ಆತಂಕ ಉಂಟುಮಾಡಿದರು. ಆದರೆ ಕೆಚ್ಚೆದೆಯಿಂದ ಮುಂದೆ ಸಾಗಿದ ನಿಶಿಕೋರಿ ಸೆಟ್ ಮತ್ತು ಪಂದ್ಯ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.