ಡೇವಿಸ್‌ ಕಪ್‌: ಪ್ರಜ್ಞೇಶ್‌, ರಾಮನಾಥನ್‌ಗೆ ಸ್ಥಾನ ಸಾಧ್ಯತೆ ಕೋಲ್ಕತಾ: ಪಾಕಿಸ್ತಾನಕ್ಕೆ ತೆರಳುವ ಭಾರತ ಡೇವಿಸ್‌ ಕಪ್‌ ತಂಡವನ್ನು ಆಗಸ್ಟ್‌ 5ರಂದು ಪ್ರಕಟಿಸಲಾಗುವುದು ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಯ(ಎಐಟಿಎ) ಪ್ರಧಾನ ಕಾರ್ಯದರ್ಶಿ ಹೃನ್ಮಯ್‌ ಚಟರ್ಜಿ ತಿಳಿಸಿದ್ದಾರೆ. ಸೆಪ್ಟೆಂಬರ್‌ 14–15ರಂದು ಇಸ್ಲಾಮಾಬಾದ್‌ನಲ್ಲಿ ಏಷ್ಯಾ–ಒಸಿನಿಯಾ ಪ್ರಥಮ ಗುಂಪು ಹಂತದ ಟೂರ್ನಿ ನಡೆಯಲಿದೆ. 1964ರ ಮಾರ್ಚ್‌ನಲ್ಲಿ ಭಾರತ ಡೇವಿಸ್‌ ಕಪ್‌ ತಂಡಕೊನೆಯ ಬಾರಿ ಪಾಕಿಸ್ತಾನದ ಪ್ರವಾಸ ಕೈಗೊಂಡಿತ್ತು.ಆ ಟೂರ್ನಿಯಲ್ಲಿ ಭಾರತ 4–0ಯಿಂದ ಜಯಿಸಿತ್ತು. ‘ಆಗಸ್ಟ್‌ 5ರಂದು ತಂಡವನ್ನು ಪ್ರಕಟಿಸಿಲಾಗವುದು. ಇಟಲಿ ವಿರುದ್ಧ ಆಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗುತ್ತದೆ. ಪಾಕಿಸ್ತಾನ ವೀಸಾ ಪ್ರಕ್ರಿಯೆ ದೀರ್ಘವಾಗಿದ್ದು, ಈ ಕುರಿತು ಶೀಘ್ರ ಕಾರ್ಯಪ್ರವೃತ್ತರಾಗಲಿದ್ದೇವೆ’ ಎಂದು ಹೃನ್ಮಯ್‌ ಹೇಳಿದರು. ಪ್ರಮುಖ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಸಿಂಗಲ್ಸ್ ವಿಭಾಗದಲ್ಲಿ ಆಯ್ಕೆಯಾಗುವ ಸಾಧ್ಯತೆಯಿದೆ. ಯೂಕಿ ಭಾಂಬ್ರಿ ಹಾಗೂ ಸುಮಿತ್‌ ನಗಾಲ್‌ ಗಾಯಗೊಂಡಿದ್ದು, ಆರೈಕೆ ಪಡೆದುಕೊಳ್ಳುತ್ತಿದ್ದಾರೆ. ರೋಹನ್‌ ಬೋಪಣ್ಣ ಮತ್ತು ದಿವಿಜ್‌ ಶರಣ್‌ ಡಬಲ್ಸ್ ಜೋಡಿಯಾಗುವ ನಿರೀಕ್ಷೆಯಿದೆ ಎಂದು ಚಟರ್ಜಿ ಸುಳಿವು ನೀಡಿದರು. ಆಟವಾಡದ ನಾಯಕ ಮಹೇಶ್‌ ಭೂಪತಿ ಹಾಗೂ ಕೋಚ್‌ ಝೀಶನ್ ಅಲಿ ಅವರು ಪಾಕಿಸ್ತಾನ ಪ್ರವಾಸಕ್ಕೆ ತೆರಳಲು ಸಜ್ಜಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.