ಜೊಕೊವಿಚ್‌ ಬ್ಯಾಸ್ಕೆಟ್‌ಬಾಲ್‌ ಕೌಶಲ ಕಂಡು ಶಹಬ್ಬಾಸ್‌ ಹೇಳಿದ ಲೆಬ್ರಾನ್ ಜೇಮ್ಸ್‌ ಮುಂಬೈ:ಮನಮೋಹಕ ಆಟದಿಂದಲೇ ಕೋಟ್ಯಂತರ ಟೆನಿಸ್‌ ಪ್ರಿಯರ ಹೃದಯ ಗೆದ್ದಿರುವ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಈಗ ಬ್ಯಾಸ್ಕೆಟ್‌ಬಾಲ್‌ನಲ್ಲೂ ಚಾಕಚಕ್ಯತೆತೋರಿ ಅಮೆರಿಕದ ದಿಗ್ಗಜ ಆಟಗಾರ ಲೆಬ್ರಾನ್‌ ಜೇಮ್ಸ್‌ ಅವರಿಂದ ಶಹಬ್ಬಾಸ್‌ ಎನಿಸಿಕೊಂಡಿದ್ದಾರೆ. ಚೆಂಡನ್ನು ಸೊಗಸಾಗಿ ಡ್ರಿಬಲ್‌ ಮಾಡುತ್ತಾ ಸಾಗಿ, ಬಳಿಕ ಅದನ್ನು ತುಸು ದೂರದಿಂದಲೇ ‌‘ಬ್ಯಾಸ್ಕೆಟ್‌’ ಮಾಡಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ 33 ವರ್ಷ ವಯಸ್ಸಿನ ಜೊಕೊವಿಚ್‌‌, ‘ನಾನು ಬ್ಯಾಸ್ಕೆಟ್‌ಬಾಲ್‌ ಆಡಲು ತಯಾರಿದ್ದೇನೆಯೇ’ ಎಂದು ಜೇಮ್ಸ್‌ ಅವರನ್ನು ಪ್ರಶ್ನಿಸಿದ್ದರು. ಟ್ವಿಟರ್‌ನಲ್ಲಿ ಈ ವಿಡಿಯೊ ನೋಡಿ ಪ್ರತಿಕ್ರಿಯಿಸಿರುವ ಎನ್‌ಬಿಎ ತಾರೆ ಜೇಮ್ಸ್‌ ‘ಖಂಡಿತವಾಗಿಯೂ ನೀವು ಬ್ಯಾಸ್ಕೆಟ್‌ಬಾಲ್‌ ಆಡಲು ಅರ್ಹರಿದ್ದೀರಿ. ನಿಮ್ಮ ಡ್ರಿಬ್ಲಿಂಗ್ ಕೌಶಲ, ಕೆಲ ನಡೆಗಳು (ಫಾಲೊ ಥ್ರೂ) ಚೆನ್ನಾಗಿದೆ ಗೆಳೆಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಜೊಕೊವಿಚ್‌ ಹಾಕಿರುವ 10 ಸೆಕೆಂಡುಗಳ ಈ ವಿಡಿಯೊವನ್ನು 8 ಲಕ್ಷದ 87 ಸಾವಿರ ಮಂದಿ ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೊ ವೀಕ್ಷಿಸಿರುವವರ ಸಂಖ್ಯೆ ಬರೋಬ್ಬರಿ 19 ಲಕ್ಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.