ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಅಮೆರಿಕ ಓಪನ್ ಟೆನಿಸ್ ನ್ಯೂಯಾರ್ಕ್: ಟೆನಿಸ್ ಕ್ರೀಡೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿ ಅಮೆರಿಕ ಓಪನ್ ಟೆನಿಸ್ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ‘ಆಗಸ್ಟ್‌ 31 ರಿಂದ ಸೆಪ್ಟೆಂಬರ್ 13ರವರೆಗೆ ನ್ಯೂಯಾರ್ಕ್‌ ಕ್ವೀನ್ಸ್‌ನಲ್ಲಿ ಯು.ಎಸ್‌. ಓಪನ್ ಟೂರ್ನಿಯು ನಡೆಯಲಿದೆ. ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುವುದು’ ಎಂದು ನ್ಯೂಯಾರ್ಕ್‌ ಗವರ್ನರ್ ಆ್ಯಂಡ್ರ್ಯೂ ಕೌಮೊ ಟ್ವೀಟ್ ಮಾಡಿದ್ದಾರೆ. ‘ಅಮೆರಿಕ ಟೆನಿಸ್ ಸಂಸ್ಥೆಯು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದೆ. ಆಟಗಾರರು, ಸಿಬ್ಬಂದಿ ಮತ್ತಿತರರ ಆರೋಗ್ಯ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಘುವುದು. ಎಲ್ಲರ ಸಮಗ್ರ ತಪಾಸಣೆ, ನೈರ್ಮಲ್ಯ, ಹೆಚ್ಚುವರಿ ಲಾಕರ್ ರೂಮ್, ಪ್ರಯಾಣ ಮತ್ತು ವಸತಿಯಲ್ಲಿ ಸಾಮಾಜಿಕ ಅಂತರಕ್ಕೆ ಆದ್ಯತೆಯನ್ನು ನೀಡಲಾಗುವುದು. ಯಾವುದೇ ರೀತಿಯಿಂದಲೂ ವೈರಸ್‌ ಸೋಂಕಿಗೆ ಒಳಗಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಕೌಮೊ ಬರೆದಿದ್ದಾರೆ. ಕೊರೊನಾ ವೈರಸ್ ಸೋಂಕಿನ ಕಾರಣ ಕೆಲವು ಪ್ರಮುಖ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಗಳನ್ನು ರದ್ದು ಪಡಿಸಲಾಗಿತ್ತು. ಹೋದ ವಾರವಷ್ಟೇ ಅಮೆರಿಕ ಓಪನ್ ಟೂರ್ನಿಯನ್ನು ಆಗಸ್ಟ್‌ನಲ್ಲಿ ನಡೆಸುವುದಾಗಿ ಅಮೆರಿಕ ಟೆನಿಸ್ ಸಂಸ್ಥೆ ಹೇಳಿತ್ತು. ಆದರೆ ಪ್ರೇಕ್ಷಕರಿಗೆ ಪ್ರವೇಶ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ. ಇದೀಗ ಗವರ್ನರ್ ಕೌಮೊ ಸ್ಪಷ್ಟಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.