ಟೆನಿಸ್‌ ಆಟಗಾರ ವಿಕ್ಟರ್‌ಗೂ ಕಾಡಿದ ಕೋವಿಡ್‌ ಬೆಲ್‌ಗ್ರೇಡ್‌, ಸರ್ಬಿಯಾ: ಟೆನಿಸ್‌ ಆಟಗಾರ ವಿಕ್ಟರ್‌ ಟ್ರೊಯಿಕಿ ಹಾಗೂ ಆತನ ಗರ್ಭಿಣಿ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಸರ್ಬಿಯಾದ ಟ್ರೊಯಿಕಿ ಅವರು ನೊವಾಕ್‌ ಜೊಕೊವಿಚ್‌ ಆಯೋಜಿಸಿದ್ದ ಏಡ್ರಿಯಾ ಟೂರ್‌ ಪ್ರದರ್ಶನ ಟೆನಿಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಆಡಿದ್ದ ಗ್ರಿಗರ್ ಡಿಮಿಟ್ರೋವ್ ಹಾಗೂ ಬೊರ್ನಾ ಕೊರಿಕ್‌ ಅವರಿಗೂ ಕೋವಿಡ್‌–19 ದೃಢಪಟ್ಟಿತ್ತು. ‘ಪತ್ನಿ ಹಾಗೂ ನನಗೆ ಕೋವಿಡ್‌ ಇರುವುದು ಖಾತರಿಯಾಗಿದೆ’ ಎಂದು 34 ವರ್ಷ ವಯಸ್ಸಿನ ಟ್ರೊಯಿಕಿ ಮಂಗಳವಾರ ಹೇಳಿದ್ದಾರೆ. ಬೆಲ್‌ಗ್ರೇಡ್‌ನ ಜೊಕೊವಿಚ್‌ ಟೆನಿಸ್‌ ಸಂಕೀರ್ಣದಲ್ಲಿ ಇದೇ ತಿಂಗಳ 13 ಮತ್ತು 14ರಂದು ನಡೆದಿದ್ದ ಏಡ್ರಿಯಾ ಟೂರ್‌ನ ಮೊದಲ ಲೆಗ್‌ನ ಟೂರ್ನಿಯಲ್ಲಿ ಟ್ರೊಯಿಕಿ ಕಣಕ್ಕಿಳಿದಿದ್ದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜೊಕೊವಿಚ್‌ ವಿರುದ್ಧ ಆಡಿದ್ದರು. ಪಂದ್ಯದ ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.