ಟೆನಿಸ್‌ ಕೋಚ್‌ ಇವಾನಿಸೆವಿಚ್‌ಗೆ ಕೋವಿಡ್‌ ದೃಢ ಜಾಗ್ರೆಬ್‌: ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಆಯೋಜಿಸಿದ್ದ ಪ್ರದರ್ಶನ ಟೂರ್ನಿಯಲ್ಲಿ ಭಾಗವಹಿಸಿದ್ದ ಕೋಚ್‌ ಒಬ್ಬರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. ಈ ಹಿಂದೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆಗಿದ್ದ ಗೊರಾನ್‌ ಇವಾನಿಸೆವಿಚ್‌ ಸೋಂಕಿತರು. ‘ದುರಾದೃಷ್ಟ...ನನ್ನಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದೆ. ನನಗೆ ಸದ್ಯ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದೇನೆ’ ಎಂದು ಇವಾನಿಸೆವಿಚ್‌ ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 48 ವರ್ಷದ ಇವಾನಿಸೆವಿಚ್‌ ಅವರು ಜೊಕೊವಿಚ್‌ ಅವರ ತರಬೇತುದಾರರ ತಂಡದಲ್ಲಿ ಒಬ್ಬರಾಗಿದ್ದಾರೆ. ‘ನಾನು ಪ್ರತ್ಯೇಕವಾಸದಲ್ಲಿರುತ್ತೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದುಇವಾನಿಸೆವಿಚ್‌ ಮನವಿ ಮಾಡಿಕೊಂಡಿದ್ದಾರೆ. ವಿಶ್ವದ ಅಗ್ರ ಕ್ರಮಾಂಕದ ಆಟಗಾರ ಜೊಕೊವಿಚ್‌ ಹಾಗೂ ಅವರ ಪತ್ನಿ, ಪ್ರದರ್ಶನ ಟೂರ್ನಿಯಲ್ಲಿ ಆಡಿದ್ದ ಬಲ್ಗೇರಿಯಾದ ಗ್ರಿಗೊರ್‌ ಡಿಮಿಟ್ರೊವ್‌, ಕ್ರೊವೇಷ್ಯಾದ ಬಾರ್ನಾ ಕೊರಿಚ್‌ ಹಾಗೂ ಸರ್ಬಿಯಾದ ವಿಕ್ಟರ್‌ ಟ್ರೊಯ್ಸಿ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೋವಿಡ್‌ ಪಿಡುಗಿನ ನಡುವೆಯೂ ಟೂರ್ನಿ ಆಯೋಜಿಸಿದ್ದ ಹಾಗೂ ಅಂತರ ನಿಯಮ ಪಾಲಿಸದ ಕಾರಣ ಜೊಕೊವಿಚ್‌ ಅವರ ನಡೆಯನ್ನು ಹಲವು ಆಟಗಾರರು ಖಂಡಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.