ಮೈಸೂರು ಓಪನ್ ಟೆನಿಸ್: ಜಾರ್ಜ್‌ಗೆ ಪ್ರಶಸ್ತಿ ಮೈಸೂರು: ಸಮಯೋಚಿತ ಆಟವಾಡಿದ ಬ್ರಿಟನ್‌ನ ಜಾರ್ಜ್ ಲ್ಹೊಫಗೆನ್ ಭಾನುವಾರ ಇಲ್ಲಿ ಮುಕ್ತಾಯವಾದ ‘ಐಟಿಎಫ್- ಮೈಸೂರು ಓಪನ್’ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು. ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್(ಎಂಟಿಸಿ)ನಲ್ಲಿ ಜಾರ್ಜ್ ಲ್ಹೊಫಾಗೆನ್ ಅವರು 4-6, 6-2, 7-6ರಲ್ಲಿ ಆಸ್ಟ್ರೇಲಿಯಾದ ಬ್ಲೇಕ್ ಎಲಿಸ್ ವಿರುದ್ಧ ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿದರು. ಬಲವಾದ ಸರ್ವ್, ಗ್ರೌಂಡ್ ಸ್ಟ್ರೋಕ್ ಹೊಡೆತಗಳಿಂದ ಕಾಡಿದ ಆಸ್ಟ್ರೇಲಿಯಾದ ಬ್ಲೇಕ್ ಮೊದಲ‌ ಸೆಟ್ ಅನ್ನು ಸುಲಭವಾಗಿ ಗೆದ್ದರು. 2ನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಜಾರ್ಜ್ 6-2ರಿಂದ ಬ್ಲೇಕ್ ಅವರನ್ನು ಮಣಿಸಿ ಸೆಟ್ ಗೆದ್ದರು. ನಿರ್ಣಾಯಕ 3ನೇ ಸೆಟ್‌ನಲ್ಲಿ ಇಬ್ಬರೂ ಪ್ರಬಲ ಪೈಪೋಟಿಯ ಆಟವಾಡಿದರು. ಬ್ಲೇಕ್ 5-4ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾಗ ಪುಟಿದೆದ್ದ ಜಾರ್ಜ್ ಲ್ಹೊಫಗೆನ್ 5-5ರ ಸಮಬಲ ಸಾಧಿಸಿದರು. ಆಕರ್ಷಕ ಸರ್ವ್‌ಗಳ ಮೂಲಕ ಮೇಲುಗೈ ಸಾಧಿಸಿದರು. 2 ಗಂಟೆ 49 ನಿಮಿಷದಲ್ಲಿ ಟೈ ಬ್ರೇಕ್ ಮೂಲಕ ಸೆಟ್ ವಶಪಡಿಸಿಕೊಂಡು 2023ರ ಮೈಸೂರು ಓಪನ್ ಟೆನಿಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು‌. ‘ಬ್ಲೇಕ್ ಉತ್ತಮವಾಗಿ ಆಡಿದರು. ಮೊದಲ ಸೆಟ್ ಸೋತಾಗ ಗೇಮ್ ಪ್ಲಾನ್ ಬದಲಿಸಿದೆ. ಸರ್ವ್‌ಗಳನ್ನು ಮುರಿದು ಬ್ರೇಕ್ ಪಾಯಿಂಟ್ ಹೆಚ್ಚಿಸಿಕೊಂಡಿದ್ದು, ಆತ್ಮವಿಶ್ವಾಸ ಹೆಚ್ಚಿಸಿತು. ನೆನಪಿನಲ್ಲಿ ಉಳಿಯುವ ಟೂರ್ನಿಯಾಗಿತ್ತು’ ಎಂದು‌ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು. ಜಿಲ್ಲಾಧಿಕಾರಿ ಡಾ.ಕೆ.ವಿ‌.ರಾಜೇಂದ್ರ ಅವರು ವಿಜೇತರಿಗೆ ₹2.95 ಲಕ್ಷ ಮೊತ್ತದ ಚೆಕ್ (3,600 ಡಾಲರ್) ಅನ್ನು ನೀಡಿದರೆ, ಕರ್ನಾಟಕ ರಾಜ್ಯ ಲಾನ್‌ ಟೆನಿಸ್ ಸಂಸ್ಥೆಯ ಕಾರ್ಯದರ್ಶಿ ಮಹೇಶ್ವರ ರಾವ್ ಟ್ರೋಫಿ ವಿತರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.