ಅಂಕಿತಾ ಮಿಂಚು: ಭಾರತಕ್ಕೆ ಜಯ ತಾಷ್ಕೆಂಟ್‌, ಉಜ್ಬೆಕಿಸ್ತಾನ (ಪಿಟಿಐ): ಹಿನ್ನಡೆಯಿಂದ ಪುಟಿದೆದ್ದ ಭಾರತ ತಂಡದವರು ಬಿಲ್ಲಿ ಜೀನ್ ಕಿಂಗ್ ಕಪ್‌ ಟೆನಿಸ್‌ನ ಏಷ್ಯಾ–ಒಷಾನಿಯಾ ಸ್ಪರ್ಧೆಯ ಮೊದಲ ದಿನ ಥಾಯ್ಲೆಂಡ್ ತಂಡಕ್ಕೆ ಸೋಲುಣಿಸಿದರು. ಬುಧವಾರ ಇಲ್ಲಿ ನಡೆದ ಹಣಾಹಣಿಯಲ್ಲಿ ಭಾರತ 2–1ರಿಂದ ಗೆದ್ದಿತು. ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಋತುಜಾ ಭೋಸ್ಲೆ ಅವರು 2–6, 1–6ರಿಂದ ಥಾಯ್ಲೆಂಡ್‌ನ ಲುಕ್ಸಿಕಾ ಕುಮ್‌ಕುಮ್‌ ಎದುರು ಸೋತರು. ಆದರೆ ಎರಡನೇ ಸಿಂಗಲ್ಸ್‌ ಪಂದ್ಯದಲ್ಲಿ ಅಂಕಿತಾ ರೈನಾ ನಿರಾಸೆಗೊಳಿಸಲಿಲ್ಲ. ಅನುಭವಿ ಆಟಗಾರ್ತಿ 5-7, 6-1, 6-3ರಿಂದ ಪಿಯಂಗ್‌ತಾರ್ನ್‌ ಪ್ಲಿಪೆಚ್‌ ಎದುರು ಗೆದ್ದು ಭಾರತ ಸಮಬಲ ಸಾಧಿಸುವಂತೆ ಮಾಡಿದರು. ಡಬಲ್ಸ್‌ ಸೆಣಸಾಟದಲ್ಲಿ ಅಂಕಿತಾ ಹಾಗೂ ಋತುಜಾ ಜೋಡಿ 4-6, 6-3, 6-2ರಿಂದ ಕುಮ್‌ಕುಮ್‌ –ಪ್ಲಿಪೆಚ್‌ ಅವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.