ಮ್ಯಾಡ್ರಿಡ್‌ ಓಪನ್‌: ಫೈನಲ್‌ಗೆ ಬೋಪಣ್ಣ– ಎಬ್ಡೆನ್‌ ಮ್ಯಾಡ್ರಿಡ್‌: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯು ಎಬ್ಡೆನ್ ಜೋಡಿಯು ಮ್ಯಾಡ್ರಿಡ್‌ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಫೈನಲ್ ತಲುಪಿದೆ. ಇಲ್ಲಿ ನಡೆಯುತ್ತಿರುವ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ 43 ವರ್ಷದ ಬೋಪಣ್ಣ ಹಾಗೂ 35ರ ಎಬ್ಡೆನ್‌ 5-7, 7-6(3), 10-4ರಿಂದ ಮೆಕ್ಸಿಕೊದ ಸ್ಯಾಂಟಿಯಾಗೊ ಗೊನ್ಜಾಲೆಜ್‌ ಮತ್ತು ಫ್ರಾನ್ಸ್‌ನ ಎಡ್ವರ್ಡ್‌ ರೋಜರ್ ವೆಸಲಿನ್ ಅವರನ್ನು ಮಣಿಸಿದರು. ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಭಾರತ–ಆಸ್ಟ್ರೇಲಿಯಾ ಜೋಡಿ ಗುರುವಾರ ಗೆಲುವಿನ ನಗೆ ಬೀರಿತು. ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಬೋಪಣ್ಣ ಹಾಗೂ ಎಬ್ಡೆನ್‌, ರಷ್ಯಾದ ಕರೆನ್ ಕಚನೊವ್‌– ಆ್ಯಂಡ್ರೆ ರುಬ್ಲೆವ್ ಎದುರು ಸೆಣಸುವರು. ಮತ್ತೊಂದು ಸೆಮಿಫೈನಲ್‌ನಲ್ಲಿ ಕಚನೊವ್–ರುಬ್ಲೆವ್‌ 6-4, 6-4ರಿಂದ ಫ್ರೆಂಚ್‌ ಓಪನ್‌ ಚಾಂಪಿಯನ್‌ಗಳಾದ ಮಾರ್ಸೆಲೊ ಅರೆವಲೊ– ಜೀನ್‌ ಜೂಲಿಯನ್‌ ರೋಜರ್ ಅವರನ್ನು ಪರಾಭವಗೊಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.